ಮಾತು ಇಷ್ಟೇ ಏಕೆ?!!

ಇಷ್ಟಕ್ಕೇ ನಿಲ್ಲಿಸಿದ್ದು ತಪ್ಪು
ರಾತ್ರಿಗಳ ಅನಾಥವಾಗಿಸಿ
ಮೌನವ ಲೇಪಿಸಿದ್ದು ಅಪರಾಧ,
ನಾವಿನ್ನೂ ಚೂರು ಮಾತಾಡಿದ್ದರೆ
ಬೆಳಕು ಬೀದಿಗೆ ಬರುತ್ತಿತ್ತೇ?!!
ಛೇ, ಈ ಕತ್ತಲನ್ನ ಲಘುವಾಗಿ ಪರಿಗಣಿಸಿದ್ದು
ನಮ್ಮ ಮೌಢ್ಯದ ಪರಮಾವಧಿ!!

ಎಲ್ಲ ಮಾತು ಮುಗಿಯುವಷ್ಟರಲ್ಲಿ
ಮತ್ತೆ!! ಎಂಬ ಉದ್ಗಾರಕ್ಕೆ
ಮತ್ತಷ್ಟು ಮಾತು ಹುಟ್ಟಿಕೊಳ್ಳುವ ಪರಿ
ಅದೆಷ್ಟು ಸೊಗಸು ಅನ್ನುತ್ತೀಯ!!
ನಾನಂತೂ ಬೇಕಂತಲೇ ಸಂಭಾಷಣೆಯನ್ನ
ಮೊಟಕುಗೊಳಿಸಿ ಖುಷಿ ಪಡುತ್ತೇನೆ
ನಿನ್ನ ಆ ಉದ್ಗಾರದಿಂದ!!

ಬೇಟಿಯಾದದ್ದು ಅದೆಷ್ಟು ಬಾರಿ?
ಸೋಕಿಕೊಂಡದ್ದು ಅದೆಷ್ಟು ಸಲ?
ಕಣ್ಣು ಅದೆಷ್ಟು ಬಾರಿ ಬೆರೆತದ್ದು?
ಇವ್ಯಾವೂ ಲೆಕ್ಕಕ್ಕೆ ಯೊಗ್ಯವಾದಂತವಲ್ಲ,
ಅಥವ ಅವು ನನ್ನ ಸೋಲಿಸಬಹುದಾದ
ಸಾಧ್ಯತೆಯಿಂದಲೇ ಹಾಗನಿಸಿದ್ದುಂಟು,
ಯಾವುದಕ್ಕೂ ಟಿಪ್ಪಣಿ ಸಹಿತ ಸಂದೇಶ
ನಿನ್ನ ಮನದಂಚೆಗೆ ರವಾನಿಸಿ
ನಂತರ ಮುಂದಿನ ಕೆಲಸದತ್ತ ಗಮನ ಹರಿಸಬೇಕು!!

ಇಷ್ಟಕ್ಕೂ ನಾವು ಮಾತಾಡಿದ್ದು ತಿರಾ ಕಮ್ಮಿ
ಬಹುಶಃ ಮುಂದಿನ ಎರಡು ಜನ್ಮಕ್ಕೆ ಸಾಕಾಗುವಷ್ಟು,
ಅದರಾಚೆಗಿನವುಗಳ ಗತಿ?
ಮತ್ತೆ, ಮತ್ತೆ ಮತ್ತಷ್ಟು ಕಾರಣಗಳು ಸಿಗುತ್ತಾ ಹೋದಂತೆ
ಮಾತು ದಡವಿಲ್ಲದ ಕಡಲಲೆಯಂತಾಗಿ
ನಿರಾಯಾಸದಿಂದ ಮುಂದುವರಿಯುತ್ತದೆ,
ಮುತ್ತುಗಳ ವಿನಿಮಯವಂತೂ
ಒಂದು ಅದ್ಭುತ ರುಚಿಕಟ್ಟು ಹಣ್ಣಿನಂತೆ

ಸಮಯದ ಮುಳ್ಳಿನಷ್ಟು ಕೆಲಸಕ್ಕೆ ಬಾರದ
ವಿನಾಕಾರಣ ಸದ್ದು ಮಾಡುತ್ತ ತಿರುಗುವ
ತಿರುಬೋಕಿ ಮನೆಹಾಳು ವಸ್ತುವನ್ನ
ನನ್ನ ಬಾಳಿನಲ್ಲೇ ಕಂಡಿಲ್ಲ,
ಸುಖಾಸುಮ್ಮನೆ ಬೆಳಕಿಗೆ ಚಾಡಿ ಹೇಳಿ
ಕೈ ಹಿಡಿದು ಕರೆತರುತ್ತಾನೆ ಅಂಗಳಕ್ಕೆ;
ಮಂಗಳವೆಲ್ಲ ಅಮಂಗಳ
ಕತ್ತಲು ಕಣ್ಮರೆಯಾಗುತ್ತಿದ್ದಂತೆ
ಮಾತು ಮತ್ತೆ ಗೂಡು ಕಟ್ಟಿಕೊಂಡು
ಬೆಚ್ಚಗೆ ಮಲಗಿಬಿಟ್ಟಿತು!!
                                        
                                                 -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩