ಇಂದಿಗಿಷ್ಟು

ಎಷ್ಟೆಲ್ಲ ಮಾತು ಇಂದಿಗೆ
ನಾಳೆಗೆ ಏನನ್ನೂ ಉಳಿಸಿಲ್ಲ
ಹೇಗೆ ಕಾಲವ ನೂಕುವುದು?

ಮತ್ತೆ, ಮತ್ತೆ ಅದೇ ಪುಂಗಿ ಊದಿದರೆ
ಸಹ್ಯವೆನಿಸುವುದಿಲ್ಲ
ಹಾಗಂತ ಕಟ್ಟು ಕಥೆಗಳ ಹೇಳಬಹುದೇ?
ಛೆ, ಛೆ... ಅದು ಒಲ್ಲದ ಕೆಲಸ

ಹಾ.. ಒಂದು ಪರೀಕ್ಷೆಯಿಟ್ಟಿದ್ದಾಳೆ,
ಅವಳಲ್ಲಿ ನಾ ಮೆಚ್ಚಿದ ಅಂಶಗಳ
ಕಾವ್ಯ ರೂಪಕ್ಕೆ ಇಳಿಸಬೇಕಂತೆ,
ಹರಿವ ನೀರಿಗೆ ತಗ್ಗು ಸಿಕ್ಕಂತಾಯ್ತು
ಸರಾಗಮಾನವಾಗಿ ಹರಿಯಿತಿಲ್ಲಿ
ತಲ್ಲಣರಹಿತ ಭಾವ ಲಹರಿ

ಎಲ್ಲಿಂದ ಮೊದಲಾಗಿಸಿದರೂ
ಅದೇ ನಾಚಿಕೆ ಕೊನೆಗೊಳಿಸುತಲಿದೆ
ಇನ್ನೆಲ್ಲಿಂದ ಮೂಡ ಬೇಕು ಪದ ಕಟ್ಟು?
ಇಳಿಜಾರು ಸಿಕ್ಕಿತೆಂದು
ಕೈ ಸೇರದಂತೆ ಭಾವನೆಗಳು
ಹರಿದು ಹಂಚಿಹೋದಾಗ
ಆರಿಸುವುದೆಲ್ಲಿ? ಬಿಡುವುದೆಲ್ಲಿ? ಬರೆವುದೆಲ್ಲಿ?

ಒಮ್ಮೆ ಆಕೆಯ ಚಿತ್ರ ಪಟದತ್ತ
ಕಣ್ಣಾಯಿಸಲೆಂದು ಹೋದವನು
ಮರಳಿ ಸಹಜ ಸ್ಥಿತಿಗೆ ಹೊರಳಿದ್ದು
ಗಂಟೆಗಳು ಕ್ಷಣಗಳಂತೆ ಉರುಳಿದ ಮೇಲೆಯೇ,
ಆ ಕಣ್ಣು ಮಾಯಾಜಾಲವೇ ಸರಿ!!

ಎಲ್ಲಿಗೆ ಬಂದು ತಲುಪಿಬಿಟ್ಟೆ?
ವಿಲಕ್ಷಣ ನಕ್ಷತ್ರಗಳೂ ಸಪ್ಪೆ ಅನಿಸುತ್ತಿವೆ,
ಆಕೆ ಕೈ ಹಿಡಿದು ನಡೆಸದ ವಿನಹ
ಒಂದು ಹೆಜ್ಜೆಯನ್ನೂ ಮುಂದಿಡಲಾರೆ
ಇನ್ನು ಬರೆವುದೆಂದರೆ ಹೇಗೆ?!!

ಅಗೋ.. ಆಗಲೇ ಬಂತವಳ ಮೇಘ ಸಂದೇಶ,
ಮತ್ತದೇ ಮಾತು ಮುಂದುವರಿಯಿತು
ಹಳಿ ಹಂಗು ತೊರೆದ ರೈಲಿನಂತೆ!!
                                                
                                         -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩