ಮರ ಮತ್ತದರ ಸಾವು

ಉದುರಿಬಿದ್ದ ತೆಂಗಿನ ಗರಿಯ ಕಂಡು
ಮಿಕ್ಕೆಲ್ಲ ಪಚ್ಚೆ ಗರಿಗಳು ಅರಚುತ್ತಿವೆ,
ಸಾವು ಕೇವಲ ಸಿದ್ಧಿಸಿದವರಿಗೇ ಸೀಮಿತ
ಉಳಿದವರು ಅದಕೆ ರುಜುವಾತು ಮಾತ್ರ

ಗೋಳಿಟ್ಟು ಬಿದ್ದು ಬುರುಡೆ ಸೀಳಾದ
ಎಳೆ ತೆಂಗಿನಕಾಯಿಗೆ
ಸುಕ್ಕಾದ ಸಿಪ್ಪೆಯ ಮುದಿ ಕಾಯಿ
ನಾಲ್ಕು ಕಂಬನಿಯ ಹೊರತುಪಡಿಸಿ
ಬೇರೇನನ್ನೂ ಮೀಸಲಿಡಲಾಗಿಲ್ಲ

ಭೂಮಿ ತನ್ನಲ್ಲಿ ಹುದುಗಿಸಿಟ್ಟ
ಅದೆಷ್ಟೋ ಉಸಿರು ಸತ್ತ ಜೀವಗಳಿಗೆ
ಮರುಜನ್ಮವಿತ್ತ ಪುಣ್ಯಕ್ಕೇ
ಸತ್ತವೆಲ್ಲ ಇನ್ನೂ ಭೂಮಿಯನ್ನೇ ಅವಲಂಬಿಸಿವೆ!!

ಗೆದ್ದಲು ಹಿಡಿದ ಬುಡದ ತೊಗಟು
ಪುಡಿ ಪುಡಿಯಾಗಿ ಉದುರುತ್ತಿದೆ,
ಮತ್ತೆ-ಮತ್ತೆ ನೆಲಕುರುಳುವ ದುಃಸ್ವಪ್ನ
ಮತ್ತೆ-ಮತ್ತೆ ಹೊಸ ಚಿಗುರು;
ಹರಿದ ನೆತ್ತರ ಗೋಂದು
ಅದೆಷ್ಟು ಇರುವೆಗಳ ಪಾಲಿಗೆ ಆಹಾರವಾಯಿತೋ,
ಅದೆಷ್ಟು ಇರುವೆಗಳ ಜೀವ ತೆಗೆಯಿತೋ!!

ನೆಟ್ಟವರು ಬದುಕಿಲ್ಲ,
ಬದುಕಿದ್ದವರು ನೆಟ್ಟವರ ಸ್ಮರಿಸುತ್ತಾರೆ
ಅದೇ ಮರದ ಎಳನೀರ ಸವಿಯುತ್ತ
ಉಳಿದ ಗರಿಗಳ ನೆರಳಲ್ಲಿ ನಿಂತು
"ಇದ್ಯಾವುದೋ ಸಪ್ಪೆ ತಳಿ,
ಯಾಕೋ ಸೊಟ್ಟಗೆ ನೆಟ್ಟಿದ್ದಾರಲ್ಲ?,
ಎರಡು ಮಾರು ದೂರ ನೆಡಬೇಕಿತ್ತು"
ಇಂತಿತ್ಯಾದಿಯಾಗಿ!!

ಮರ ಇಂದಲ್ಲ ನಾಳೆ ಸಾಯುತ್ತದೆ
ಇದ್ದಷ್ಟೂ ದಿನ ಕೊಂಕು ಮಾತಿಗೆ ತಲೆ ಕೆಡಿಸಿಕೊಳ್ಳದೆ
ಕೊನೆಗೆ ಒಂದೇ ಸಾವು,
ಒಳಗೊಳಗೆ ಸತ್ತದ್ದಕ್ಕೆ ಲೆಕ್ಕವೇ ಇಲ್ಲ!!
                                                     
                                               -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩