ಒಪ್ಪಿಸಿಕೊಂಡಾದಮೇಲೆ

ನಿನ್ನ ಬಿಟ್ಟು ಬದುಕಬಲ್ಲ
ಶಕ್ತಿ ನೀನೇ ಒದಗಿಸು
ಸಾವಿನಂಚಿನಲ್ಲಿ ಚೂರು
ನಕ್ಕು ನನ್ನ ಬದುಕಿಸು

ದಿಕ್ಕು ದಾರಿ ತೋಚದಂಥ
ಊರ ಹಾದಿ ತೋರಿಸು
ಒಂಟಿತನದ ಕಷ್ಟಗಳನು
ಪಕ್ಕ ನಿಂತು ಆಲಿಸು

ಕಣ್ಣು ಕಾಣದಷ್ಟು ಸಿರಿಯ
ಕಣ್ಣ ತುಂಬ ತುಂಬಿಸು
ಎಲ್ಲವನ್ನೂ ಮೀರುವಂತೆ
ನಿನ್ನ ಚಿತ್ರ ಬಿಂಬಿಸು

ಇರುವೆ ಬಿದ್ದ ಹೊಳೆಯಲೊಂದು
ಹಣ್ಣೆಲೆಯ ಉದುರಿಸು
ಉಸಿರುಗಟ್ಟಿ ಸತ್ತ ಹೆಣವ
ದೂರ ದಡಕೆ ಮುಟ್ಟಿಸು

ಬದುಕಿನಾಚೆ ಬದುಕುವುದಕೆ
ಬದುಕಲೆಂತೋ ರೂಪಿಸು
ನನ್ನ ಗುರುತಿನೆಲ್ಲೆ ತುಂಬ
ನಿನ್ನ ಗುರುತ ವ್ಯಾಪಿಸು!!
                              -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩