ಒಮ್ಮೊಮ್ಮೆ ನಾನು

ಅರ್ಥವಿಲ್ಲದ ಮಾತಿಗೆ
ಒಳಾರ್ಥಗಳು ಸಾಕಷ್ಟಿದ್ದವು
ಆದರೂ ಅನರ್ಥಕ್ಕೇ ಮಣೆ ಹಾಕಿದೆ


ಒತ್ತಿ, ಒತ್ತಿ ಹೇಳಿಕೊಟ್ಟದ್ದ ಬದಿಗೊತ್ತಿ
ಗೊತ್ತಿದ್ದೂ ಹುಂಬನಾಗುವುದರಲ್ಲಿ
ನನಗೆ ಎಲ್ಲಿಲ್ಲದ ವಿಕೃತ ಖುಷಿ


ದ್ರಾಕ್ಷಾರಸದ ಮತ್ತಿಗಿಂತ ಮಿಗಿಲಾದ
ಅಮಲಿನ ದ್ರವ್ಯದ ಹುಡುಕಾಟದಲಿ
ನಿಶೆಯೇರಿಸಬಲ್ಲ ಎಷ್ಟೋ ಲಾಯಕ್ಕಾದವುಗಳ
ಕಡೆಗಣಿಸಿ ಅಪರಾಧವನ್ನೆಸಗಿದ್ದೇನೆ!!


ತುಟಿಗೆ ಬಂದ ಮಾತು
ಮನಸನು ಹಗುರಾಗಿಸದೆ ಹೋದಾಗ
ನುಂಗಿಕೊಂಡಾಗಿನ ಸಂಕಟಕೆ
ಆಡಿದ ಮಾತುಗಳ ಅಭಾವವೇ ಸಾಕ್ಷಿ


"ಬೆರಳ ತುದಿಯಲ್ಲಿ ತೋರುವುದಷ್ಟೇ ಹೊರತು
ಹಿಡಿಯಲು ಮುಷ್ಟಿ ಬಿಗಿಯಲೇ ಬೇಕು"
ಸತ್ಯವ ಮರೆತು ಅತೃಪ್ತ ಬೇತಾಳನಾಗಿದ್ದೇನೆ
ನನ್ನದೇ ಸಂತೆಯಲಿ ನಾನೊಬ್ಬನೇ ಅಲೆದಾಡಿ


ಎಲ್ಲವನ್ನೂ ಅಪೂರ್ಣದಲ್ಲೇ ಕೊನೆಗೊಳಿಸುತ್ತೇನೆ
ಎಲ್ಲವನ್ನೂ......


                                                   -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩