ನಾನೊಂದು ಕನಸ ಕಂಡೆ

ನನ್ನ ಮನದ ಬೀದಿಯಲ್ಲಿ
ನೀವು ಸಾಗಿಸಿ ಹೊರಟ
ಹೂವ ತೇರು ಅದರ ಕಂಪು
ಇನ್ನೂ ಮಾಸದಾಗಿದೆ
ಬೀದಿ ತುಂಬ ಹೊಂಡ ಬಿದ್ದು
ಬಳುಕಿ ಬಿದ್ದ ಹೂವ ಹೆಕ್ಕಿ
ಕಣ್ಣಿಗೊತ್ತಿಕೊಂಡೆ ಹಾಗೇ
ಹಿಂದೆ ಮುಂದೆ ನೋಡದೆ


ದೂರ ತಿರುವಿನಲ್ಲಿ ತೇರು
ಕಾಣುವಷ್ಟೂ ಹೊತ್ತು ನಾನು
ಕಣ್ಣ ಮೇಲೆ ರೆಪ್ಪೆ ಸೋಕದಂತೆ
ನಿಂತೆ ನೋಡುತ
ಯಾವ ಮಾತೂ ಹೊರಡಲಿಲ್ಲ
ಬೆರಳೂ ಕೂಡ ಹೊರಳಲಿಲ್ಲ
ಮೌನ ರಾಗದಲ್ಲಿ ಮಿಂದು
ಕರಗಿ ಹೋದೆ ಹಾಡುತ


ಯಾವ ತೋಟಗಾರನಲ್ಲಿ
ಏನ ಕೊಟ್ಟು ತಂದ ಹೂವೋ?
ಬರೇ ಹೂವಲ್ಲ ಅವು
ಜೀವ ತಾಕೋ ಘಮಲಿದೆ
ಮಣ್ಣು ಕೂಡ ಎಷ್ಟು ಗೌಪ್ಯ-
ರಮ್ಯ ಕಲೆಯ ಒಡೆಯನಲ್ಲ?
ಬಿತ್ತಿದಲ್ಲಿ ಎಲ್ಲ ತಾನು
ಚಿತ್ರ ಕಾವ್ಯ ಬಿಡಿಸಿದೆ!!


ಎಷ್ಟೋ ಬಾರಿ ಹಿಂದೆ ಬಿದ್ದು
ನನ್ನ ಮನೆಯ ದಾರಿ ಮರೆತು
ಯಾರೋ ತಡೆದು ಕೈಯ್ಯ ಹಿಡಿದು
ಬಾಗಿಲಲ್ಲಿ ಬಿಟ್ಟರು
ಹೊನ್ನ ತೇರು, ಬೆಳ್ಳಿ ತೇರು
ಎಲ್ಲ ಹಾದು ಹೋದವಲ್ಲಿ
ಹೂವ ಗಂಧದಷ್ಟು ಚಂದ
ಯಾವೂ ಇಲ್ಲ ಆದರೂ


ನಾನೂ ಕೂಡ ಕಟ್ಟುತಿರುವೆ
ಒಂದು ಇಂಥದೇ ತೇರ
ಬೋಳು ಬೋಳಾಗಿ ಇನ್ನೂ
ಬೀದಿಗಿಳಿಸದಾದೆನು
ನೆನ್ನೆ ರಾತ್ರಿ ಕನಸಿನಲ್ಲಿ
ಮನಸಿನಿಂದ ಮನಸಿನೆಡೆಗೆ
ನನ್ನ ತೇರೂ ಹರಿದ ಹಾಗೆ
ಹಗಲುಗನಸು ಕಂಡೆನು!!


                      -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩