ಕೀರ್ತನೆ!!

ಕೊಟ್ಟೂ ಕಿತ್ತುಕೊಂಡದ್ದೇಕೆ ನೀನು?
ನೀನು ಮನಗಡಲ ಸಣ್ಣ ಮೀನು,
ಹೆಣೆದ ಬಲೆಗಳೆಲ್ಲ ಮೂಲೆಗುಂಪಾದವು
ಹಿಡಿಯಲೊಲ್ಲದೆ ನಿನ್ನ
ಅಥವ ಹಿಡಿದೂ ಬಿಟ್ಟುಗೊಟ್ಟು!!


ಕಣ್ಣ ಬಣ್ಣ ಕಂಡಷ್ಟೇ ಅಸ್ಪಷ್ಟ
ಅಲ್ಲಿ ಎಲ್ಲ ಆಸೆಗಳ ಖಜಾನೆ ಕೀಲಿಯಿದೆ,
ಗುಡಾಣದಲ್ಲಿ ಹೆಗ್ಗಣಗಳ ಆರ್ಭಟ
ಒಲವೊಂದನ್ನ ಬಿಟ್ಟು ಎಲ್ಲವನ್ನೂ ತೆರೆದಿಟ್ಟೆ
ಅಲ್ಲೇ ಮನದ ಮೂಲೆಗೆ ಮುನಿದು ಮಲಗಿದವು
ಎಲ್ಲಕ್ಕೂ ನಮ್ಮೊಲವೆಡೆಗೇ ಒಲವು!!


ಯಾವ ತಂಬೂರಿ ತಂತಿಗೂ ನಿಲುಕದ ಶೃತಿಯ ಹಾಡು,
ಕೇಳಿಸುವ ಪ್ರಯಾಸಕ್ಕೆ ತಣ್ಣೀರೆರಚಿ
ಸಂಯೋಜನೆ ಹಂತದಲ್ಲೇ ಕದ್ದು
ಅದು ನಿನ್ನದೇಯೆಂಬಂತೆ ಹಾಡುತ್ತೀಯ;
ಹೌದು, ಅದು ನಿನ್ನದೇ ಹಾಡು!!


ಬರೆಯದ ಕವಿತೆಗಳೆಷ್ಟು ಸೊಗಸು!!
ಅವ್ಯಾವಕ್ಕೂ ಮಿತಿಯಿಲ್ಲ, ಮೊದಲಿಲ್ಲ, ಕೊನೆಯಿಲ್ಲ;
ನಿಲ್ಲಿಸಿದ್ದೇ ನಿಲ್ದಾಣ,
ಇಳಿದು ಹೊರಟ ಭಾವಗಳ ಹೆಜ್ಜೆ ಗುರುತುಗಳಲ್ಲಿ
ಒಂದು ನನ್ನದಾದರೆ
ಮತ್ತೊಂದು ನಿನ್ನದೆಂದು ಒತ್ತುಗೊಟ್ಟು ಹೇಳಬೇಕಾಗಿಲ್ಲ!!


ಕಣ್ಣ ತುದಿಯಲ್ಲಿ ಅಕ್ಷರಗಳ ಸಂತೆ
ಅಲ್ಲಿ ಪ್ರತಿ ನಿತ್ಯ ಅಲೆದಾಡಿ
ಒಂದಿಷ್ಟು ಆಯ್ದ ಪದಗಳಿಗೆ ಜೀವ ತುಂಬುತ್ತೇನೆ,
ಕವಿತೆಗೆ ನಿನ್ನ ಹೆಸರಿಟ್ಟು!!


                                                   -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩