Monday 24 August 2015

ನಾ ನಾನಲ್ಲದೆ

ಅದೆಲ್ಲಿಂದಲೋ ಅನಾಮಿಕ ಹಕ್ಕಿಯೊಂದು ಹಾರಿ ಬಂದು
ಅಮ್ಮ, ಅಪ್ಪನ ರಕ್ಷೆಯಲ್ಲಿ ಬೆಚ್ಚಗೆ ಆಟವಾಡಿಕೊಂಡಿದ್ದ ಮರಿಯನ್ನ
ಹೇಳ ಹೆಸರಿಲ್ಲದಂತೆ ಹೊತ್ತು ಹೊರಟು ನಿಂತಾಗ
ಗಾಂಭೀರ್ಯಕ್ಕೆ ಹೆಸರುವಾಸಿ ಅಪ್ಪ ಹಕ್ಕಿ
ಬಿಕ್ಕಿ-ಬಿಕ್ಕಿ ಅಮ್ಮನ ಕಣ್ಣೀರಿಗೆ ಕಣ್ಣೀರ ಬೆಸೆಯುತ್ತದೆ


ಉಂಡು ಹೋದ, ಕೊಂಡು ಹೋದ ಹಕ್ಕಿ
ದೂರದ ಗೂಡಿಂದ ಗರ್ವದ ನಗೆ ಬೀರುತ್ತ
ಕನಿಕರ ತೋರಿದ್ದೇ ತೋರಿದ್ದು
ಮರಿ ಹಕ್ಕಿಗೆ ದ್ವಂದ್ವ
"ಎಲ್ಲಿ ಸಲ್ಲಲಿ ನಾನು?"


ಅಮ್ಮ ಹಕ್ಕಿ ಕನವರಿಸಿ, ಕನವರಿಸಿ
ಗೂಡಿಂದ ಕುಸಿದು ಬೀಳುವಷ್ಟು ನಿಸ್ಸಹಾಯಕಳಾಗುತ್ತದೆ
ಅಪ್ಪ ಹಕ್ಕಿ ಅನಾಮಿಕ ಹಕ್ಕಿಯ ಹುಡುಕಿ
ಅಷ್ಟೇ ಗಾಂಭೀರ್ಯದಿಂದ ನೋವಾಗದಂತೆ ಚಾಟಿ ಬೀಸುತ್ತದೆ


ಮರಿ ಹಕ್ಕಿ ಅಲ್ಲಿಯೂ ಕ್ಷೇಮ
ಆದರೆ ತುಸು ಬಿನ್ನ ಪ್ರೇಮ,
ಇತ್ತ ತವರ ನೆನಪಾಗಿ ಅಳುತ್ತದೆ
ಅತ್ತ ತವರಲ್ಲಿ ಜೋರು ಮಳೆ
ಗೂಡನ್ನಷ್ಟೇ ತೋಯಿಸುವಂತೆ!!


ಸ್ವಂತಿಕೆಯ ಪುನರ್ಸ್ಥಾಪನೆಯ ಹಾದಿಯಲಿ ಸವಾಲುಗಳ ಸಾಲು
ಮರಿ ಹಕ್ಕಿ ಎಲ್ಲವನ್ನೂ ದಾಟಲು ಸಜ್ಜಾಗುತ್ತದೆ
ಅನಾಮಿಕ ಹಕ್ಕಿಯೂ ಈಗ ಹೆಸರಿಟ್ಟುಕೊಳ್ಳುತ್ತದೆ
ಮರಿ ಹಕ್ಕಿಯ ಹೆಸರಿಗೆ ಕೊಕ್ಕು ಸಿಕ್ಕಿಸಿ


ಇಷ್ಟು ಸಲೀಸಾಗಿ ಬಿಟ್ಟುಗೊಡಬಾರದಿತ್ತು,
ಅಪ್ಪ, ಅಮ್ಮ ಹಕ್ಕಿಗಳು ಒಪ್ಪಿಕೊಳ್ಳುವ ಮುನ್ನ
ಒಮ್ಮೆ ಕುತ್ತಿಗೆ ಹಿಡಿದು ದರ್ಪ ತೋರದಿದ್ದರೆ ಹೇಗೆ?!!
ಏನೇ ಇರಲಿ
ಹೆಸರಾದದ್ದು ಈಗ ಹೆಸರು ಹಂಚಿಕೊಂಡದ್ದರ ಜೊತೆಗೆ ಖುಷಿ ಪಡುವುದು
ಅಂತರಾತ್ಮಕ್ಕೆ ಕಿಚ್ಚಿಷ್ಟು ಒಪ್ಪುತ್ತಿಲ್ಲ,
ಇಷ್ಟಾಗಿಯೂ ಬಾಳ್ಮೆಗೇನೂ ಕುಂದಿಲ್ಲ!!


ಎಲ್ಲಕ್ಕೂ ಕ್ಷೇಮ ಬಯಸುವ ಬರದಲ್ಲಿ
ಒಮ್ಮೊಮ್ಮೆ ಜೀವನ ತಕ್ಕಡಿ ಒಂದೆಡೆಗೇ ಹೆಚ್ಚು ವಾಲಿದಾಗ
ಈಚೆಗಿನ ಕೈ ಸೋಲೊಪಿಕೊಳ್ಳುತ್ತದೆ
ತನ್ನ ಪ್ರಾಬಲ್ಯದ ಸರದಿಗೆ ಕಾದು ಕೂತು!!


All is well that ends well!!

                                             -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...