ನಾನೇನೆಂಬುದು!!

ಹಿತ್ತಲ ಇರುವೆ ಗೂಡಿನ ಸುತ್ತ
ಸಕ್ಕರೆ ಚಿಲ್ಲಿ ಬಂದೆ
ಮನೆಯೊಳು ಗೆಜ್ಜೆ ಕಟ್ಟಿಬಂದವುಗಳ
ವಿಷವಿತ್ತು ಕೊಂದೆ


ಬೆಳಕಿಗೆ ದಾರಿ ಮಾಡಿ ಕೊಟ್ಟು
ಕಿಟಕಿ ಪರದೆಯನು ತೆರೆದೆ
ಗಾಳಿ, ಬೆಳಕು ನುಸುಳದಂತೆ
ಹಣತೆಗೆ ಬೀಗ ಜಡಿದೆ


ಮೇಲೆ ಚಿಗುರ ಕಂಡು
ಹಬ್ಬದಂತೆ ಮಗ್ನಗೊಂಡೆ
ಕೆಳಗೆ ಕೊರೆದು ಕೊರೆದು
ಬೇರ ಸಹಿತ ದೋಚಿಕೊಂಡೆ


ಮುಗಿಲು ಸುರಿಸಿಕೊಂಡ ಹನಿಗೆ
ಖುಷಿಯ ಅರ್ಥ ಕೊಟ್ಟೆ
ಕೆನ್ನೆ ಮೇಲೆ ಮೂಡಿ ಬಂದವಕೆ
ನೋವನಿಟ್ಟೆ


ಹೊರಗೆ ಹರಕಲಂಗಿ ತೊಟ್ಟು
ಮೈಯ್ಯ ಮುಚ್ಚಿಕೊಂಡೆ
ಒಳಗೆ ಬಣ್ಣ ಕಳಚಿಕೊಳದೆ
ಗೌಪ್ಯವಾಗೇ ಉಳಿದೆ


ಬಾಗಿಲಲ್ಲಿ ತಳಿರು ಕಟ್ಟಿ
ಬಾಡಿದವನು ತೂರಿ ಬಿಟ್ಟೆ
ಕ್ರೌರ್ಯ ಕಾರ್ಯದಲ್ಲೂ ಮಾನವೀಯತೆ
ಮುಖವಾಡ ತೊಟ್ಟೆ!!


                                         -- ರತ್ನಸುತ

Comments

Popular posts from this blog

ಜೋಡಿ ಪದ

ಗರುಡ ಪ್ರಯತ್ನ ೩

ಗರುಡ ಗೀತ ಸಾಹಿತ್ಯ ೧