ಚಿಗುರಿನ ಹೊಸತು

ಮಾತ ತಡೆಯಲು ಹಸ್ತ ಸಲ್ಲ
ತುಟಿಯಾದರೆ ಹಸ್ತಕ್ಷೇಪವಿಲ್ಲ
ಸತ್ತ ಮಾತುಗಳ ಮುಕ್ತಿಗಾಗಿ
ಒಮ್ಮೆ ಯತ್ನಿಸಿ ನೋಡುವ ಸಹಜವಾಗಿ


ಕತ್ತಲಾವರಿಸುತ್ತಲೇ ಮೌನ
ಕಣ್ರೆಪ್ಪೆ ಮೇಲೆ ಗೀಚಲೇ ಕವನ?
ತಾಳ ತಪ್ಪದಿರಲಿ ಸಪ್ಪಳದ ಹಾಡು
ದೀಪವೂ ನಾಚಿ ಬಳುಕುವುದ ನೋಡು!!


ಪಲ್ಲಂಗಕೆ ದಿಂಬು ಬೇಡವಾಗಿ
ಒಂದೊಂದು ಬದಿಯಲ್ಲಿ ಒಂದೊಂದು
ಮುನಿದು ನೆಲಕಪ್ಪಳಿಸಿಹುದ ಬಲ್ಲೆ
ನಸುಕು ಕಳೆಯಲಿ ಚಿಂತೆ ಬಿಡು ನಲ್ಲೆ


ಹೂವ ಹೊಸಕಿದ ಒಡಲು
ಗಂಧ ಧೂಪವ ಕೂಡಿ
ಕೋಣೆಯ ನಿರ್ಜೀವ ಗೋಡೆಗಳ
ಅಮಾನುಷವಾಗಿ ಬದುಕಿಸಬಾರದಿತ್ತು


ದೀಪ ಆರುವ ಸಮಯದ ನಿಗದಿಯಿಲ್ಲ
ಇದ್ದರೂ ನಮಗದು ಬೇಕಾಗೇಯಿಲ್ಲ
ಗಡಿಯಾರದ ಕಾಲಿಗೆ ಚುಚ್ಚಿ ಮುಳ್ಳು
ಉಳಿದಲ್ಲೇ ನರಳಿತು ದಯೆ ತೋರಲಿಲ್ಲ


ಹೊನ್ನ ಕಿರಣದ ದಿಬ್ಬಣ ಬಂದಿದೆ
ಆಗಷ್ಟೇ ಮುಚ್ಚಿದ ಕಣ್ಣ ತೆರೆಸೆ
ಆಕೆ ಹಣೆಬೊಟ್ಟ ಹುಡುಕುತಲಿದ್ದಳು
ತುಂಟ ನಗೆಬೀರಿ ಅರಳಿತು ಮೀಸೆ!!


                                         -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩