Monday 24 August 2015

ಚೂರು-ಪಾರು ಪ್ರೀತಿಯಲ್ಲಿ

ಚೂರು ನೆಲ, ಚೂರು ನಭ
ಕಣ್ಣಿಗೆ ಒಂದಿಷ್ಟು ಬೆಳಕು
ಕತ್ತಲ ಒಂದಷ್ಟು ಬೆರಗು
ಮಾತಿನ ಸುಗಂಧದೊಡನೆ
ಮೌನದ ಕಿರು ತಂಗಾಳಿ
ಬೇಕು ಚೂರು ಖುಷಿಯ ಜೊತೆ
ರುಚಿಗೆ ತಕ್ಕ ಕಂಬನಿ
ಪ್ರೀತಿಯ ಪ್ರಕಾರಗಳಿಗೆ
ಮಿಡಿವ ಮನವೇ ಮಾರ್ದನಿ!!


ಚೂರು ಹಿತ, ಬಿನ್ನಮತ
ಚೂರು ಕೋಪ ತರಿಸುತಲೇ
ಇರಲಿ ಕೊಂಚ ತಾಳ್ಮೆ,
ಬರಲಿ ಬಂದ ಹಾಗೆ
ಹಾಗೇ ತೊಲಗುವಂತೆ ನೋವು
ಅಳಿಯದಿರಲಿ ನಮ್ಮ ಒಳಗೆ
ಒಲುಮೆಯೆಂಬ ಕಾವು


ಎಡವಲೊಂದು ಕಲ್ಲು
ಜಾರಲೊಂದು ತಗ್ಗು
ಸುಧಾರಣೆಗೆ ಇರಲಿ ಒಂದು
ಸಮತಟ್ಟು ತಾಣ,
ಸಣ್ಣ ಗೂಡು ಬದುಕಲು
ಚಿಟಿಕೆ ವಿರಹ ಅದರೊಳು
ಎಲ್ಲ ಸಿರಿಯ ಮೀರಿ ಪ್ರೇಮ
ಸತ್ವಗೊಳಲಿ ಪ್ರಾಣ


ಪರ ವಹಿಸಲು ಹೆಗಲು
ಪರವಶಿಸಲು ಪ್ರಣಯ
ಪರಿಣಮಿಸುವ ಪ್ರಗತಿಯಲ್ಲಿ
ನಾ-ನೀನೇ ಮಿಗಿಲು,
ಕೊನೆ ಮೊದಲೂ ಒಂದೇ
ನಡು ಬಯಲೂ ನಮದೇ
ಕಿಚ್ಚಿಷ್ಟೂ ಪ್ರೇಮವದು
ಹಿಂಗಿಹೋಗದಿರಲು!!


ಸ್ವಗತಗಳ ಜೀವಂತಿಕೆ
ಅಸ್ತಿತ್ವದ ಹಂಬಲಕೆ
ತೊಟ್ಟಿಲಾಗುವ ನೀಡಿ
ಕಾವ್ಯ ಮೆಟ್ಟಿಲ,
ಚೂರು ಆಧರ್ಶದೊಳಗೆ
ಸ್ವಾರ್ಥವೂ ಕೂಡಿ ಇರಲಿ
ಬಾಳು ನಿಕೃಷ್ಟವಲ್ಲ
ನೀಡಬಹುದು ಬೆಂಬಲ!!


                   -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...