ಕನಸಲ್ಲಿ ಮಾತ್ರ ಹೀಗೆಲ್ಲ

ಕನಸ ಕಟ್ಟಿಕೊಳ್ಳುವ ಭರದಲ್ಲಿ
ಇರುಳುಗಳ ಇರಿದಿರಿದು ಕೊಂದೆ
ಸತ್ತದ್ದು ನಿದ್ದೆ
ಬಿದ್ದ ಕನಸು ಒಂದೇ!!


ಒಂದು ಕನಸಿಗೆ ನೂರು ಕೊಂಡಿ
ದಿನಕ್ಕೊಂದೊಂದು ನಾಟಿಕೊಳ್ಳುತ್ತಾ
ಹೊಂದುಕೊಂಡಂತೆ ಕಂಡರೂ
ತೀರ ಭಿನ್ನವಾದ ಸ್ವಭಾವದವು


ಎಲ್ಲೊ ನಗುವ ಶಬ್ಧಕ್ಕೆ
ಇನ್ನೆಲ್ಲೋ ಬಿಕ್ಕಳಿಕೆಯ ತಾಳ,
ತೀರಾ ವಿಚಿತ್ರವೆನಿಸಿದರೂ
ಚಿತ್ರಿಸುವಂಥ ಕನಸದಲ್ಲ!!


ದಿಂಬುಗಳು ಲೆಕ್ಕ ಪುಸ್ತಕದೊಳಗೆ
ತಿದ್ದಿ ಇಟ್ಟ ಕನಸುಗಳ ಲೆಕ್ಕಕ್ಕೆ ಲೆಕ್ಕವೇ ಇಲ್ಲ
ಚಿತ್ತು ಕಲೆಗಳ ಅಡುಯ ಅಂಕಿ ಅತ್ತು
ಮೇಲೆ ಮೆರೆದವುಗಳ ಕೆನ್ನೆಗಂಟಿತು ಹನಿ


ಬೆಳಗೆದ್ದು ಹಸ್ತಕನ್ನಡಿ ನೋಡಿಕೊಂಡರೆ
ಕನಸಿನೊಂದು ಮಸಿಯ ಕಲೆ,
ಇದೇ ಕೈಗಳಿರಬೇಕು ಅಲ್ಲಿ ತಪ್ಪು ಎಸಗಿದ್ದು
ಪ್ರೀತಿ ಮಾಡಿದ್ದು, ಮೋಸ ಮಾಡಿದ್ದು


ಮತ್ತಿದೇ ಕೈಗಳು ಮತ್ತೊಮ್ಮೆ ಮಿನುಗಿದವು
ದಾನ, ದಯೆ, ಧರ್ಮದ ಹೊಲದಲಿ ಕಸಿ ಮಾಡಿ;
ಕತ್ತರಿಸಿಕೊಳ್ಳಬೇಕಾಗಿದ್ದ ಸಂದರ್ಭ ಈಗ
ಹಾಸ್ಯ ಸನ್ನಿವೇಶ!!


ಕನಸ ತಡೆಯುವಷ್ಟು ಶಕ್ತ ನಾನಲ್ಲ
ಬಿದ್ದವುಗಳನ್ನೇ ಮೇಲೆತ್ತುವಷ್ಟು ಪರಿಣಿತ
ಕೊಂಡಿಯ ಸಿಕ್ಕಿಸಿಕೊಳ್ಳುವ ಮೂಲ ಕನಸೊಂದು
ಈಗಷ್ಟೇ ಬೀಳುವ ಸೂಚನೆ
ಮಲಗಿದಂತೆ ಮಲಗಿ, ಎದ್ದು ಬರುವೆ ತಾಳಿ!!


                                                     -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩