ಹೀಗೂ ಬದುಕ ಕಟ್ಟಿಕೊಳ್ಳೋಣ

ಗಾಳಿ ಎತ್ತ ಬೀಸುತ್ತದೆಯೋ
ಅತ್ತಲೇ ವಾಲಿಬಿಡೋಣ
ಜೋಡಿ ಗರಿಕೆಯ ರೀತಿ


"ಇಬ್ಬನಿ ಹಿಂಗುವುದರ ಹಿಂದೆ
ಯಾವುದೋ ಸಂಕಲ್ಪವಿರಬಹುದು"
ಹೀಗಂದುಕೊಂಡೇ ಬೆವೆತುಬಿಡೋಣ


ಯಾರೋ ಇಟ್ಟ ಪಾದದಡಿಯ
ಗಂಧವೋ, ಕೆಸರೋ, ಧೂಳೋ
ನಮ್ಮ ಸೋಕುವುದು ಖಚಿತ,
ಮತ್ತೆ, ಮತ್ತೆ ಮಳೆಯನ್ನ ನೆನೆಯೋಣ
ಮತ್ತೇರುವಂತೆ ನೆನೆಯೋಣ


ಸೂರ್ಯೋದಯಕೆ ಗರಿ ಬಿಚ್ಚಿ
ಸೂರ್ಯಾಸ್ಥಮಕೆ ಬಿಗಿದಪ್ಪಿ
ಮಿಕ್ಕಂತೆ ತುಂಬೊಲವಲ್ಲಿ ತಲ್ಲೀನರಾಗಿ
ತಂಗಾಳಿಗೆ ಪರಿಚಿತರಾಗೋಣ


ಇದ್ದೂ ಇರದಂತೆ ನೊಂದು
ಇರದೆಯೂ ಇದ್ದಂತೆ ಬಿರಿದು
ಒಮ್ಮೆ ಮೊಗ್ಗು, ಒಮ್ಮೆ ಹಿಗ್ಗಿ
ಹೂವಾಗುವಾಸೆಯಲೇ ಸವೆಯೋಣ


ಹಸಿರಾಗಿ, ಕೆಂಪಾಗಿ
ಕಂದಾಗಿ, ಕಪ್ಪಾಗಿ
ಮುಪ್ಪಲ್ಲಿಯೂ ಒಪ್ಪುವಂತಾಗೋಣ
ಸಾವಲ್ಲಿಯೂ ಜೊತೆಯಲೊಂದಾಗೋಣ!!


                                            -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩