Monday 24 August 2015

ಎಚ್ಚರದ ನಿದ್ದೆಯಲ್ಲಿ

ಮುಖಬೆಲೆಯೇ ಇಲ್ಲದ ಕನಸುಗಳು
ಕಣ್ಣ ಮುತ್ತಿಕೊಳ್ಳುವ ಮುನ್ನ
ಸಣ್ಣ ಜ್ವರದಷ್ಟಾದರೂ ಹಿಂಸೆಯಾಗದಿದ್ದರೆ
ಕನಸಿನ ಬೆಲೆ ಅರಿವಿಗೇ ಬರಲಾರದು


ಮೈ ಸುಡುತಿಲ್ಲ, ಉಸಿರ ಶಾಖ ಮಾತ್ರ
ಮೀಸೆಗೆ ಬೇಗೆಯನ್ನೇ ಬಡಿಸುತ್ತಿದ್ದರೆ
ನಾಲಗೆ ಏನನ್ನೋ ಚಡಪಡಿಸುತ್ತಿದೆ
ರುಚಿಗೆಟ್ಟ ಕನಸುಗಳಿಗೆ ಬೀಗ ಜಡಿದೆ


ಹಗಲೆಲ್ಲ ಗುಳಿಗೆಯ ಏಟಿಗೆ ಪಲ್ಲಂಗಕ್ಕೆ ಅಂಟಿ ಸತ್ತು
ರಾತ್ರಿಯ ನಿದ್ದೆ ಎಚ್ಚರವಾಗಿದೆ
ಮನದ ಮಣ್ಣನು ಹದವಾಗಿ ಸಡಿಲಿಸಿ
ಬಿತ್ತಿ ಕಾದು ಕೂತೆ ಕುಕ್ಕರುಗಾಲಲ್ಲಿ
ಚಿಗುರುಗನಸುಗಳು ಕಣ್ತಪ್ಪಿಸಿ ಚಿಗುರಿಬಿಟ್ಟವು!!


ಅವಳಿಗಾಗಿ ಒಂದಷ್ಟು ಹಾಡು ಹಾಡಿ
ಮಲಗಿಸಿದ್ದೇ ದೊಡ್ಡ ಕೆಲಸ ಆದಂತೆ
ಈಗ ಕನಸಲ್ಲಿ ಅವಳೊಡನೆ ವಿಹರಿಸಬಹುದು
ನನ್ನಿಷ್ಟಕ್ಕನುಗುಣವಾಗಿ!!


ಪ್ರೀತಿ ಕನಸ ಕಾಣಲು ಅವಕಾಶಗಳ ಬಗಿಲುಗಳ ತೆರೆದಂತೆಲ್ಲ
ಕನಸುಗಳ ಮೇಲೆ ಪ್ರೀತಿ ಮೂಡುತ್ತಿದೆ
ಇಷ್ಟೋ, ಅಷ್ಟೋ ಕಸಿವಿಸಿಯೆನಿಸಿದರೂ
ಒಟ್ಟಾರೆಯಾಗಿ ನೋಡುವುದಾದರೆ ಎಲ್ಲಕ್ಕೂ ಮಾಫಿ!!


ಹೊತ್ತಾಯಿತು ಮಲಗೇಳುತ್ತೇನೆ,
ನಿದ್ದೆ ಮಾಡುವುದರ ಕುರಿತು ಖಾತರಿಯಿಲ್ಲ
ಆದರೆ ಮಂಪರುಗಣ್ಣಲ್ಲಾದರೂ
ಕನಸುಗಳು ಸ್ಪಷ್ಟವೆನಿಸದ ಪಕ್ಷದಲ್ಲಿ
ಓರೆ ಕೋರೆಗಳ ಹದವಾಗಿಸಿ
ನನ್ನಿಷ್ಟಕ್ಕೆ ತೂಗಿಸಿಕೊಳ್ಳಬಹುದು,
ಕನಸುಗಳು ಮತ್ತಷ್ಟು ಜೀವಂತವಾಗಬಹುದು!!


                                                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...