ಹೇಳತೀರದವು

ಇತ್ತೀಚೆಗೆ ಬರೆದದ್ದೆಲ್ಲಕ್ಕೂ ನಿನ್ನ ನೆರಳೇ ಅಂಟಿ
ಒಂದು ಸೊಂಪಾದ ಅನುಭೂತಿ ಪದಗಳಿಗೆ;
ಹಗಲೆಲ್ಲಾ ಕಾಡಿದವುಕ್ಕೆ ರಾತ್ರಿ ಮುಕ್ತಿ,
ರಾತ್ರಿ ಕಾಡಿದವುಕ್ಕೆ ಹಗಲಲ್ಲಿ


ಹೀಗೆ ಬಿಟ್ಟೂ ಬಿಡದಂತೆ ಕಾಡುವ ಪರಿಗೆ
ಕಣ್ಣಾಲಿಗಳು ಎಲ್ಲಿ ಪಳಗಿದವೋ ಕಾಣೆ,
ಸೂಜಿಗಲ್ಲಿಗೂ ಮೀರಿದ ಶಕ್ತಿಯೆದುರು
ನಿಸ್ಸಹಾಯಕ ಕಬ್ಬಿಣದ ಹರಳಾಗುತ್ತೇನೆ!!


ದೂರ ಕ್ರಮಿಸಿದಷ್ಟೂ ಆಕ್ರಮಿಸಿಕೊಳ್ಳುವ
ನಿನ್ನ ಪಾರದರ್ಶಕ ನೋಟಕ್ಕೆ ಸೋತವುಗಳಲ್ಲಿ
ನಾ ಮೊದಲಿಗನಾಗಬಯಸುತ್ತೇನೆ,
ಸೋಲಿನ ಸರದಿಗಳ ಅಂಕಿಪಟ್ಟಿಯಲ್ಲಿ


ಒಬ್ಬರ ಉಸಿರ ಮತ್ತೊಬ್ಬರು ಸೇವಿಸುವಷ್ಟು
ಸನಿಹವಾಗುವುದರೊಳಗೆ "ಎಂಥ ಸಾವ್ ಮಾರ್ರೆ!!"
ಎಂದು ಉದ್ಗರಿಸುವಷ್ಟು ಸಿಟ್ಟು ತರಿಸಿದ್ದು
ನಿನ್ನ ಮೇಲಿದ್ದ ಅಗಾಧ ಮೋಹದಲ್ಲೇ ದೂರುಳಿಯಬೇಕಾದ ಕಾರಣಕ್ಕೆ


ಕೈ ರುಚಿಗೂ ಮೀರಿದ ಸ್ವಾದಕ್ಕೆ ಮಾರುಹೋದೆ,
ಇದೇ ಮೊದಲ ಬಾರಿಯೇನಲ್ಲ
ಆದರೆ ವಿಶೇಷವೆನಿಸುವಂತೆ ಇದೇ ಮೊದಲು
ನಿನ್ನ ಮಾತೊಳಗಿನ ಮೌನ ರುಚಿಸಿದಾಗ


ನನ್ನ ಹೆಸರ ಕಿತ್ತು
ನಿನ್ನ ಹೆಸರೊಡನೆ ಜೋಡಿಸಿಕೊಂಡಷ್ಟೇ ಸಲೀಸಾಗಿ
ನಿನ್ನ ಉಸಿರಲ್ಲಿ ಬೆರೆತು ಹೋಗುತ್ತೇನೆ
ಅಪ್ಪಣೆ ನೀಡದೆ ಕಾಯಿಸು, ಕಳ್ಳನಾಗುತ್ತೇನೆ!!


                                                   -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩