ಒಂದಷ್ಟು ದಿನಗಳೆದಂತೆ

ತಪ್ಪು ತಿಳುವಳಿಕೆಗಳೆಷ್ಟು ಆಹ್ಲಾದಕರ!!
ಸ್ಪಷ್ಟನೆಗಳ ನೀಡುತ್ತಿದ್ದಂತೆ ತೆರೆದುಕೊಳ್ಳುವ
ಮನಸು ಮನಸುಗಳ ನಡುವಿನಂತರ
ಇಂಚಿಂಚು ಕಡಿಮೆಯಾದಂತೆಲ್ಲ
ಒಮ್ಮನಸಿನ ನಿರ್ಧಾರಗಳು ಹುಟ್ಟಿಕೊಳ್ಳುತ್ತವೆ!!


ಜಗಳಗಳೇ ಎಷ್ಟೋ ಬಾರಿ
ಸಮಸ್ಯೆಗಳ ಪರಿಹಾರ ಮದ್ದಾದಾಗ
ದಿನಕ್ಕೊಮ್ಮೆಯಾದರೂ ಜಗಳವಾಡಬೇಕನಿಸುವುದಲ್ಲದೆ
ಬೇರೆ ತೀಟೆ ಕಾರಣದಿಂದಾಗಲ್ಲ!!


ಮಾತು ಮಾತಿಗೂ ಕೊಂಕು ಸಿಕ್ಕಿಸಿ
ಕಾಲೆಳೆತಕ್ಕೆ ಮುಂದಾದ ನಾಲಗೆ
ಮೌನದಲಿ ಪಾಡಿಕೊಂಡ ಕವಿತೆಗಳ ಸಾಲು
ಹೇಳದಿರುವುದೇ ಮೇಲು,
ಅವು ಅಜ್ಜಿ ಪೆಟ್ಟಿಗೆಯ ತಿನಿಸಿನ ರೀತಿ!!


ಸೋತೆವೆಂದಾಕ್ಷಣಕ್ಕೆ ಸೋತಂತಲ್ಲ
ಅರಿವಿಗೆ ಬಾರದ ಅದೆಷ್ಟೋ ಗೆಲುವುಗಳು
ಸಾಲುಗಟ್ಟಿ ನಮ್ಮದಾಗಲು ತುದಿಗಾಲಲ್ಲಿ ನಿಂತಿರುತ್ತವೆ;
ಅಲ್ಲಿ ಆಯ್ಕೆಗಳಿಗೆ ಸ್ಥಾನವುಂಟು,
ತಿರಸ್ಕಾರಗಳಿಗೂ!!


ಕಡಿಗೋಲು ಮಜ್ಜಿಗೆಯ ಕಡಿದಾಗ
ಗಡಿಗೆಯ ತಳದಿಂದ ಮೆಲೆದ್ದ ಬೆಣ್ಣೆಗೆ
ಮತ್ತೆ ಕೂಡುವ ಮನಸಾಗದಂತೆ,
ಒಲವಿಗೂ ಅಂಥದೇ ಕಡಿಗೋಲು ಬೇಕು
ತಳಮಳದ ತಳದಲ್ಲೂ ನೆಮ್ಮದಿಯ ಕಡಿಬಹುದು


ಸ್ವೀಕಾರಗಳಿರಲಿ, ಜೈಕಾರಗಳು ಸಲ್ಲ
ಹೆಜ್ಜೆಗೆ ಹೆಜ್ಜೆಯೇ ಸಂಗಾತಿ,
ಪಯಣದ ಹಾದಿ ಯಾವುದಾದರೇನ್
ಪಯಣಿಸುವ ಮನಸಿರಬೇಕಷ್ಟೇ!!
ಮುಟ್ಟಲಾಗದ ಗುರಿಗಳಿಗೆ
ಮುಟ್ಟಿಸಿಕೊಳ್ಳುವ ಯೋಗ್ಯತೆ ಇಲ್ಲವೆಂದುಕೊಳ್ಳೋಣ
ಮುಟ್ಟಿದ ಗುರಿಯನ್ನೇ ನಮ್ಮದಾಗಿಸಿಕೊಂಡು!!


                                                -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩