ಸ್ವಗತ

ಅರ್ಪಿಸಿಕೊಂಡದ್ದಕ್ಕೆ ಬೆಲೆ ಕಟ್ಟಲಾದೀತೇ?
ಬೆರೆತ ಉಸಿರು ಎದೆಹೊಕ್ಕಾಗಿನ ಒಪ್ಪಂದಕ್ಕೆ
ಸಹಿ ಹಾಕಲೆಂದು ಹತ್ತಿರದಲ್ಲಿದ್ದೆವು
ಸಹಿ ಸಿಹಿಯೆನಿಸಿದ್ದಾಗಲೇ!!


ಕನ್ನಡಿಯೊಳಗಿನ ಬಿಂಬಕ್ಕೂ ಬಿಂಕ,
ಒಡೆದು ಪುಡಿ-ಪುಡಿಯಾಗಿಸುವುದೊಳಿತು;
ಜೋಡಿಸಿಟ್ಟ ಗೊಂಬೆಗಳು ಗೋಳಾಡುತ್ತಲೇ
ಗಲ್ಲಕ್ಕೆ ಕೆಮ್ಮಣ್ಣು ಪೂಸಿಕೊಂಡವು
ಅವಕ್ಕೆ ಜೀವವಿರದುದ್ದೇ ಲೇಸು!!


ಬೆಳಕು ಕತ್ತಲ ಪಾರದರ್ಶಕ ಸೆರಗಿನ ಹಿಂದೆ
ಇನ್ನೆಷ್ಟು ಅವಿತುಕೊಳ್ಳಲು ಸಾಧ್ಯ?
ಸಾಧ್ಯತೆಗಳೆಲ್ಲ ಖಾಲಿಯಾದಮೇಲೆ
ಸ್ವಾಭಾವಿಕತೆಯೆಡೆಗೆ ಮರಳುವ ಮನಸನು
ಹತೋಟಿಯಲ್ಲಿಟ್ಟುಕೊಳ್ಳುವುದು ಅಪರಾಧ!!


ಮಿಂಚುಗಳ ಹುಟ್ಟು ಸಾವಿನ ನಡುವೆ
ಅಪ್ಪಳಿಸಿ ಹೋದ ಅಲೆಗಳ ಲೆಕ್ಕಕ್ಕೆ
ಗೋಡೆ ತುಂಬ ಇದ್ದಲ ಗೀಟು,
ನೆಲವೆಲ್ಲ ಬತ್ತಿಹೋದ ಕಡಲು,
ಉಪ್ಪರಿಗೆ ಮುಗಿಲಿಲ್ಲದ ನೀಲಿ ಪರದೆ
ಆದರೂ ಅಲೆಗಳ ಅಬ್ಬರ, ಮಳೆಯ ಸಿಂಚನ!!


ಗುಟ್ಟುಗಳ ಗುಟ್ಟಾಗಿರಿಸಿಕೊಳ್ಳದೆ
ಇಟ್ಟು ಕಳಿಸಿದೆವು ಒಂದೊಂದು ಹೆಸರ,
ಮತ್ತೆ ಮತ್ತೆ ಮರೆತಂತೆ ಹತ್ತಿರವಾಗುತ್ತವೆ;
ಇಟ್ಟ ಹೆಸರನು ಬಿಟ್ಟು ಬೇರೆಯೇ ಕೊಟ್ಟರೂ
ಅಷ್ಟೇ ಸಾಕೆಂದುಕೊಂಡ ವಿಶಾಲ ಹೃದಯವುಳ್ಳವು!!


ಮುಗಿದವಲ್ಲಿಗೆ ಮುಗಿದಂತಲ್ಲ
ವಿನೂತನ ಹೆಜ್ಜೆಗೆ ನಾಂದಿ,
ಅರ್ಥಗಳ ಕಂಡುಕೊಂಡ ಮೆಲೆಯೇ
ಮತ್ತಷ್ಟು ಒಗಟುಗಳು ತೆರೆದುಕೊಳ್ವುದು;
ಈಗಿನ್ನೂ ನೂರು ಒಗಟುಗಳು
ತಲೆಯನ್ನ ಕೆದಕುತ್ತಿವೆ
ಹಗುರಾಗುವ ಮಾತು ಸದ್ಯಕ್ಕೆ ದೂರ!!


                                                     -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩