ಇರುಳ ದಾಟುವಂತೆ

ನಾಚಿ ಬೆಳಗು ಬಳುಕುತಿರಲು
ಸಣ್ಣ ಗಾಳಿ ಸುಳಿಯಿತು
ಇರುಳ ರಾಯಭಾರಿಯಂತೆ
ಕತ್ತಲನ್ನು ಬಡಿಸಿತು


ದೀಪ ಎತ್ತಲಿತ್ತೋ ಪಾಪ
ದೀಪವೇ ಹುಡುಕಾಡಿತು
ಬೆಂಕಿ ಕಡ್ಡಿ ಕಿಡಿಗೆ ಕಾದು
ಗೌಣವೊಂದೇ ಗುನುಗಿತು


ಅತ್ತ ಬಾನಿನಾಚೆ ಚಂದ್ರ
ಕುಡಿದು ಅಮಲನೇರಿಸಿ
ಇತ್ತ ಭೂಮಿಯನ್ನೇ ಮರೆತ
ಸುಳ್ಳು ಚುಕ್ಕಿ ತೋರಿಸಿ


ಬಿಕ್ಕಿ ಅತ್ತ ಕಣ್ಣುಗಳಲಿ
ಹೆಕ್ಕಿ ತಂದ ಕಂಬನಿ
ತನ್ನ ಪಾಡು ಪಾಡಿಕೊಂತು
ಕೆನ್ನೆ ಮೇಲೆ ಲೇಖನಿ


ಬೆತ್ತಲಾದ ಸತ್ಯಗಳಿಗೂ
ತುಂಬು ಹೊದಿಕೆ ಕತ್ತಲು
ಏರಲೆತ್ತರಕ್ಕೆ ಕನಸು
ಕಟ್ಟಬೇಕು ಮೆಟ್ಟಿಲು


ಬಿಟ್ಟ ಮುನಿಸು, ಕೊಟ್ಟ ಮುತ್ತು
ಸಾಕ್ಷಿಗಳೂ ಸುಂದರ
ಮನದ ತೆರೆದ ಮೊಗಸಾಲೆಗೆ
ಆನಿ ತೆಂಗು ಚಪ್ಪರ


ಎಲ್ಲ ಇದ್ದೂ ಕಾಣಲಿಲ್ಲ
ಕಳೆಯಲಿಲ್ಲ ಏನನೂ
ಸಾಕುಮಾಡಿ ಬರಮಾಡಿ-
-ಕೊಳ್ಳೋಣವೇ ಬೆಳಕನು?!!


                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩