ಕಂಡಿದ್ದು, ತೋಚಿದ್ದು ಇಷ್ಟು

ಮಹಡಿ ಮೆಲೆ ನಿಂತು
ದೂರದ ನಂದಿ ಬೆಟ್ಟದ ತುದಿಯನ್ನ
ಮೀರಿದ ಎತ್ತರಕ್ಕೆ ಕೈಯ್ಯ ಚಾಚಿ
ಒಂದು ಸುತ್ತು ನಕ್ಕಿಬಿಡುತ್ತಿದ್ದೆ,
ಬೆಟ್ಟಕ್ಕೆ ಏನೂ ಹಾನಿಯಾಗದಂತೆ
ಇದ್ದಲ್ಲೆ ತಟಸ್ಥ ಭಾವ ತಾಳಿತ್ತು!!


ಮನೆಯಿಂದ ದೇವನಹಳ್ಳಿ ಟೌನ್ ತಲುಪಲು
ಕೇವಲ ಮೂವತ್ತರಿಂದ ನಲವತ್ತು ನಿಮಿಷ
ಆಗೆಲ್ಲ ರಸ್ತೆ ಬದಿಯಲ್ಲಿ ಚಕ್ಕೋತ ಹಣ್ಣು
ಕಣ್ಣು ಹಾಯಿಸಿದಂತೆಲ್ಲ ಸಿಗುತ್ತಿತ್ತು
ಈಗ ಒಂದು ನೊಣಕ್ಕಾದರೂ ಇಲ್ಲ


ಬಹುಶಃ ಬೈಪಾಸ್ ರಸ್ತೆಯಾಗಿ
ಅಲ್ಲಿಗೆ ಎಲ್ಲ ಮಾರಾಟಗಾರರು
ಸ್ಥಳಾಂತರಗೊಂಡಿರಬಹುದಂದುಕೊಂಡು
ದಾಪುಗಾಲಿಟ್ಟವರಿಗೆ ನಿರಾಸೆ,
ಅಲ್ಲಿ ತಲೆಯೆತ್ತುತ್ತಿದ್ದ ದೈತ್ಯ ಕಟ್ಟಡಗಳು
ಅಂತರ್ರಾಷ್ಟ್ರೀಯ ಹೊಟೆಲ್ಗಳ
ಫ್ಲೆಕ್ಸ್ಗಳಲ್ಲಿ ಅಚ್ಚಾಗಿಸಿದ್ದ ಜಾಹೀರಾತುಗಳು
ಚಕ್ಕೋತ ಹಣ್ಣಿಗೆ ಶ್ರದ್ಧಾಂಜಲಿ ಕೋರಿದಂತಿದ್ದವು!!


ನಂದಿ ಕ್ರಾಸಿಂದ ನಂದಿ ಕಡೆಗೆ
ಜನ ಎಷ್ಟೊಂದು ಕಮರ್ಶಿಯಲ್ಲಾಗಿದ್ದಾರೆ,
ದ್ರಾಕ್ಷಿ ಗುಚ್ಚ ಹಿಡಿದು ನಿಂತವನಿಗೂ ಗೊತ್ತು
ಹಾಪ್ಕಾಂಸ್, ಸಿಟಿ ಮಾರ್ಕೆಟ್ಟಿನ ಬೆಲೆ
ಹೆಳಿದ್ದಕ್ಕಿಂತ ರುಪಾಯಿ ಕಮ್ಮಿ ಇಲ್ಲ


ಅಪಾರ್ಟ್ಮೆಂಟ್ ಸಂಸ್ಕೃತಿ ವಕ್ಕರಿಸಿಕೊಂಡ ಪರಿಸರ,
ಮತ್ತದರ ಘಾಟು
ನಂದಿ ಬೆಟ್ಟದ ತುದಿಯ ಮೂಗಿಗೆ ತಟ್ಟುತ್ತಿತ್ತು
ನನ್ನ ಗ್ರಹಿಕೆಗೂ ಅದು ಬಂದಿತ್ತು


ಮೊನ್ನೆ ಮಹಡಿ ಮೇಲೆ ನಿಂತು
ಕೈ ಚಾಚಿದಂತೆಲ್ಲ ಕಟ್ಟಡಗಳೇ ಅಡ್ಡಗಟ್ಟಿದವು
ಎಲ್ಲೋ ಮರೆಯಲ್ಲಿಯ ಧ್ಯಾನಿ
ಸತ್ತಂತೆ ಕಾಣುತ್ತಿದ್ದಾನೆ
ಧ್ಯಾನದ ವೇಷ ತೊಟ್ಟ ಹೆಣವಾಗಿದ್ದಾನೆ!!


                                             -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩