ಹೊಸ ಕವಿತೆ

ಒಂದೇ ಕವಿತೆಯನ್ನ ಬಾರಿ ಬಾರಿ ಓದುತಿರುವೆ
ಅರ್ಥವಾಗುತ್ತಿದ್ದಂತೆ ಮತ್ತೆ ಒಗಟಿನ ಸಂತೆ


ಮೊದಲಾಗಿ ಅರ್ಧಕ್ಕೆ ನಿಲ್ಲಿಸಿ
ಅರ್ಥವ ಕಂಡುಕೊಳ್ಳುವವನಿದ್ದೆ
ಏನೂ ತೋಚದಂತೆ ಸೋತು ಬಿದ್ದೆ
ಮತ್ತೆ ಮೊದಲಾಗಿಸಿಕೊಂಡೆ


ಒಮ್ಮೊಮ್ಮೆ ಅನಿಸಿದ್ದೂ ಉಂಟು
"ತಿರುಳಿಲ್ಲದ ಸಾಲುಗಳ ಓದಿ ಏನು ಪ್ರಯೋಜನ?"
ದಾಟಿ ಮುಂದಕ್ಕೆ ಸಾಗಿದೆ
ಮರು ಸಾಲು ಬಿಟ್ಟ ಸಾಲ ಕೊಂಡಿ ಬಯಸಿತು
ಹೀಗೇ ಅದೆಷ್ಟೋ ಬಾರಿ ಎಡವಿದ್ದೇನೆ!!


ಕವಿತೆ ನನ್ನದೇ,
ಆದರೆ ನಾ ಬರೆದದ್ದಲ್ಲ
ನಾ ಮಾತ್ರ ಓದಬೇಕಾದದ್ದು!!


ಪ್ರತಿ ಸಲ ಓದಿದಾಗ
ಹೊಸ ಅರ್ಥಗಳು ತೆರೆದುಕೊಳ್ಳುವಷ್ಟರಲ್ಲೇ
ಹಳೆ ಅರ್ಥಗಳು ಸಮರಕ್ಕಿಳಿಯುತ್ತವೆ,
ಯಾವುದನ್ನ ಗೆಲ್ಲಿಸಬೇಕೋ ಅರ್ಥವಾಗದಂತೆ!!


ಕವಿತೆಯ ಕೊನೆಯ ಸಾಲಿನ್ನೂ ನಿಗೂಢ
ಯಾವುದೋ ಹೊಸ ಹುಟ್ಟಿನ ಸೂಚನೆ ನೀಡುತ್ತದೆ,
ಅರ್ಥವಾಗಬೇಕಾದರೆ ಪೂರ್ತಿ ಓದಬೇಕು
ಪೂರ್ತಿಯಾಗಲು ಅರ್ಥವಾಗಬೇಕು!!


                                                      -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩