ಸಿದ್ಧಾರ್ಥನಾಗುವ ಕನಸು ಕೈ ಬಿಡಬೇಕು


ಶಾಂತನಾಗಿರುವ ಬುದ್ಧನ ಕಂಡಾಗ
ಸಿದ್ಧಾರ್ಥನ ವೈಭೋಗಗಳೆಲ್ಲ ಧೂಳೆನಿಸುತ್ತವೆ


ಕಂಪ್ಯೂಟರಿನ ಪರದೆಯ ಮೇಲೆ
ಕಣ್ಮುಚ್ಚಿಯೇ ಕಣ್ತೆರೆಸುವಾತನು
ಲಾಕ್ ಆಗುವ ಮುನ್ನ ಹೇಗಿದ್ದನೋ
ಅನ್ಲಾಕ್ ಆಗುವಾಗಲೂ ಹಾಗೇ ಇರುತ್ತಾನೆ


ಸಿದ್ಧಾರ್ಥನಾಗಲು ಹಂಬಲಿಸಿದ ಮನಸು ಮಾತ್ರ
ಲಾಕ್ ಆದಾಗ ನಿರಾಳ
ಅನ್ಲಾಕ್ ಮಾಡುವ ಮೊದಲೇ ಕರಾಳ!!


ಕಸದ ಬುಟ್ಟಿಯಲಿ ಚಿಂದಿ ಕಾಗದಗಳು
ಎಂದೋ ಉಪಯುಕ್ತ ಸರಕು,
ನನ್ನನ್ನೇ ನೋಡಿಕೊಂಡಂತಾಗುತ್ತದೆ
ಆತ್ತ ಮುಖ ಮಾಡುವಾಗಲೆಲ್ಲ


ಕ್ರೆಡಿಟ್ ಕಾರ್ಡಿನ ಬಳಕೆಯ ಸಂದೇಶಗಳು
ಆಗಾಗ ಫೋನ್ ಮೆಮೋರಿ ಫುಲ್ ಆಗಿಸುವಾಗ
ವ್ಯಾಲೆಟ್ ತೆಗೆದು ಕಾರ್ಡ್ ಕಿತ್ತೆಸೆವಷ್ಟು ಕೋಪ
ಅಲ್ಲಿಗೆ ಎಲ್ಲವೂ ಮುಗಿದಂತಲ್ಲ!!


"ಪರ್ಸನಲ್ ಲೋನ್ ಬೇಕೆ?"
ಎಂದು ಇನ್ಕಮಿಂಗ್ ಕಾಲುಗಳು ಕಾಲೆಳೆದಾಗ
"ಬೇಕು..." ಎಂದು ಕೂಗುವಾಸೆ
ನಾಳೆಗಳು ಕಣ್ಮುಂದೆ ಬಂದು
ಹಾಗೇ ಬಾಯ್ಮುಚ್ಚಿಸಿಬಿಡುತ್ತವೆ!!


ಇನ್ಬಾಕ್ಸ್ ತುಂಬ ಇಂಪಲ್ಲದ
ಇಂಪಾರ್ಟೆಂಟ್ ಮೇಲ್ಗಳೇ
ಎಲ್ಲಕ್ಕೂ ಟೈಮ್ ನೀಡದ ಹೊರತು
ತೊಲಗಿಸಿಕೊಳ್ಳುವ ಯೋಗವಿಲ್ಲ


ಆಗಲೇ ಬುದ್ಧ ನೆನಪಾಗುತ್ತಾನೆ
ವಾಲ್ಪೇಪರಿನ ತುಂಬ ನಗು ಚೆಲ್ಲುತ್ತ,
ಅವನ ಮುಖ ನೋಡುತ್ತಲೇ ಅನಿಸುತ್ತೆ
"ಸಿದ್ಧಾರ್ಥನಾಗುವ ಕನಸು ಕೈ ಬಿಡಬೇಕು"


                                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩