ಹಕ್ಕಿ ಗೂಡಿನ ಕತೆ


ಎತ್ತಲಿಂದಲೋ ಹಾರಿ ಬಂದ ಹಕ್ಕಿ
ಬೋಳು ಮರದ ತುತ್ತ ತುದಿಯ
ಸಿಡಿಲು ಬಡಿದ ರೆಂಬೆಯಲ್ಲಿ ಗೂಡು ಕಟ್ಟಿತು


ಬುಡದಲ್ಲುಳಿದವುಗಳೆಲ್ಲ ಕಂಡವು
ಗಾಳಿ ಬೀಸಿದಾಗ ಉರುಳಬಹುದೆಂದವು
ಪಾಪ ಹಕ್ಕಿ ಬುದ್ಧಿಹೀನ ಅಂದುಕೊಂಡವು


ಮೊದಲ ದಿನ ಜೋರು ಮಳೆ
ಬುಡದ ಹಕ್ಕಿಗಳೆಲ್ಲ ಬೆಚ್ಚಗುಳಿದು ಕ್ಷೇಮ
ತುತ್ತ ತುದಿಯ ಮೊಟ್ಟೆ ಕಾವಿಗೆ ಕ್ಷಾಮ
ಅದೊಂದ ಹೊರತು ಪಡಿಸಿ
ಮಿಕ್ಕಂತೆ ಅದು ಅನೂಪ ಪಕ್ಷಿಧಾಮ


ನಕ್ಕ ಬಾಕಿ ಹಕ್ಕಿಗಳಿಗೆ
ಮೂಕ ಹಕ್ಕಿ ಏನೋ ಹೇಳ ಹೊರಟಿತು
ಕೇಳುವ ಸೌಜನ್ಯವಿರದೆ
ತಮ್ತಮ ಗೂಡುಗಳನು ಗಟ್ಟಿಗೊಳಿಸುವಲ್ಲಿ
ಅವು ನಿರತವಾದವು


ಅಂದು ಸಂಜೆ ಹಿಡಿದ ಮಳೆ
ರಾತ್ರಿ ಮೀರಿ ಹಗಲು ದಾಟಿ
ಸಂಜೆ ವೇಳೆಗೊಂದಿಷ್ಟು ತಣ್ಣಗಾಯಿತು


ಮೂಕ ಹಕ್ಕಿಯಂಗೈಯ್ಯಲಿ ಪ್ರಾಣ ಹೀಡಿದು
ರೆಕ್ಕೆ ಬಡಿದು ಕಣ್ಣು ತೆರೆಯಿತು
ಗೂಡು ಮುಳುಗಲಿನ್ನು ಒಂದು ಬಾರು ಉಳಿಯಿತು
ಬುಡದ ಗೂಡು ಸಹಿತ ಮೊಟ್ಟೆ ಕೊಚ್ಚಿ ಹೋಗಿತ್ತು
ಹೆತ್ತಂಮ್ಮಂದಿರ ಅಳಲೂ ಕೇಳದಾಯಿತು


ಮತ್ತೆ ಶನಿ ಹಿಡಿದಂತೆ ಮಳೆ ಹಿಡಿಯಿತು
ಎತ್ತಲೂ ಹೋಗಲಾಗದಂತೆ ಹಕ್ಕಿ ಉಳಿಯಿತು
ಕತೆ ಮುಗಿಯದಂತೆ ಮತ್ತೆ ಮುಂದುವರಿಯಿತು!!


                                                - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩