ಹೃದಯ ಗೀತೆ


ನೀ ಹೀಗೆ ನಕ್ಕರೆ
ನಾ ಹೇಗೆ ಉಳಿಯಲಿ?
ಇನ್ನೆಂದೂ ನಗಬೇಡ ಹೀಗೆ,
ನೀ ಇರದೆ ಹೋದರೆ
ನಾ ಹೇಗೆ ಬಾಳಲಿ?
ನೆರಳಿಲ್ಲದ ಇಳೆಯ ಹಾಗೆ


ಬಿಡಿಗೂದಲಲ್ಲಿನ
ಬಿಡಿಗನಸಿನ ಘಮ
ತಟ್ಟುತಿದೆ ಎದೆಯನ್ನು ಬಿಡದೆ,
ನೂರಾರು ಸಾರಿ ನಾ
ಸತ್ತು ಬದುಕುಳಿದೆನು
ಜೀವಕ್ಕೆ ಹೊಣೆಯೆಂದೂ ನಿನದೇ!!


ಎಲ್ಲ ಸರಿಸುತ್ತ ನೀ
ನನ್ನನ್ನೇ ಆರಿಸು
ಹಠದಲ್ಲಿ ಮಗು ಬಯಸಿದಂತೆ,
ಕಣ್ಣಲ್ಲೇ ತಾಳವ
ಹಾಕುತ್ತಾ ಹೋದೆ ನೀ
ಹೇಗುಳಿಯಲಿ ಕುಣಿಯದಂತೆ?


ಎಲ್ಲಕ್ಕೂ ನಾಚಿಕೆ
ರೂಢಿ ಈಚೀಚೆಗೆ
ಪರಿಹಾರವೇನಿದಕೆ ಹೇಳು?
ಬರೆವ ಪದವೆಲ್ಲವೂ
ಬರಿಯ ಸುಳ್ಳಾಗದೆ
ಪರಿಹಾಸ ಬೇಡುತಿವೆ ಸಾಲು


ಹಿಂದಿರುಗು ಒಮ್ಮೆ
ಕರೆಯುವ ಮುನ್ನ
ಕೊರಳಲ್ಲಿ ಉಳಿಯಲಾ ಹೆಸರು,
ನೀ ನನ್ನವಳು, ನಾ
ನಿನ್ನವನು ಎಂಬುದೇ
ಬಡಪಾಯಿ ಪ್ರೇಮಿಯ ಪೊಗರು!!


                                 - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩