ಬಾ ಕೋಗಿಲೆ

ಎಲ್ಲಿ ಕಾಯುತ ಕುಳಿತೆ ಕೋಗಿಲೆ?
ಗೌಣವಾಗಿದೆ ಮನ
ಬಂದು ಒಮ್ಮೆ ನೀಡಬಾರದೇ
ಹಾಡಲೊಂದು ಕಾರಣ?


ಗೂಡು ಸ್ವತಃ ನಾನೇ ಕಟ್ಟಿದೆ
ಮೆತ್ತಗಿರಿಸಿದೆ ನಡುವಲಿ
ನಿನ್ನ ಹಂಬಲಕೊಂದು ಚಿಗುರನು
ಬೇಡಿ ಪಡೆದೆ ಮಾವಲಿ


ಬುಡಕೆ ಇಟ್ಟ ಕೊಡಲಿ ಹಿಡಿಯು
ಧೂಪವಾಗಿಹೋಗಿದೆ
ಕುಲುಮೆಯಲ್ಲಿ ಕಾದ ಕಬ್ಬಿಣ
ಊದುಗೊಳವೆಯಾಗಿದೆ


ಹಿತ್ತಲಿನ್ನೂ ಮಸಣವಲ್ಲ
ತುಂಬು ಹೂವ ಸಡಗರ
ಮತ್ತೆ ನಿನ್ನ ಕೂಗಿ ಬಿಕ್ಕಿದೆ
ಸತ್ತು ಹುಟ್ಟಿದ ಮಾಮರ


ಕಬ್ಬಗಳಿಗೆ ಹಬ್ಬವಿಲ್ಲ
ಕಬ್ಬಿಗನ ಕೈ ಹೀನವಾಗಿ
ಉಬ್ಬರಿಸಿತು ಅನಾಥ ಕೊರಳು
ನಿನ್ನ ನೆನೆದು ಘೊರವಾಗಿ


ಬಂದು ನಿಲ್ಲು ಆರಿಸುತ್ತ
ಹರಸಿ ಹೋಗು ನಿನ್ನವನ್ನ
ನಿನ್ನ ದನಿಯ ಇನಿಯನೊಡನೆ
ನಕ್ಕು ನಲಿಯಲಿ ಉಳಿದ ಪ್ರಾಣ


ನೀಡಿ ಹೋಗು ಹೊರಡೋ ಮುನ್ನ
ಕಾಯುವಿಕೆಗೆ ಚೂರು ಗರಿಮೆ
ಮುಂದಿನ ಸಲ ಬರುವ ನಿನ್ನೆಡೆ
ದ್ವಿಗುಣಗೊಳ್ಳಲಿ ಇಹದ ಒಲುಮೆ!!


                                - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩