ನನ್ನರಸಿಗೆ

ಮುತ್ತಿಡುವ ಆಟದಲಿ ಮುರಿಯೋಣವೇ
ಎಲ್ಲ ನಿರ್ಮಿತ ದಾಖಲೆಗಳ?
ಹೀಗೆ ಚೂರು ಚೆಲ್ಲಾಟದ ನಂತರ
ನಡೆಸೋಣವೇ ನಾವು ಸಣ್ಣ ಜಗಳ?


ಹೊಗಳಿದ ಗಳಿಗೆ ಮುಗುಳಿನ ಗುಳಿಗೆ
ಬಂದು ತಲುಪಿದೆ ನೋಡು ಎಂಥ ಸ್ಥಿತಿ
ಒಂಟಿ ಅನಿಸುವ ವೇಳೆ ಅಂಟಿ ಕೂತಂತೆ
ನೆರಳಲ್ಲಿ ಕೂಡ ನಿನ್ನಾಕೃತಿ


ಕನಸುಗಳ ಗುತ್ತಿಗೆ ಪಡೆದಾಗಿನಿಂದ ತಾ
ಕಣ್ಣು ನಿನ್ನ ಹೊರತು ಬೇಡವೇನನ್ನೂ
ನಿನ್ನಷ್ಟೇ ಸೊಗಸಾಗಿದೆ ನನ್ನ ದಿನಚರಿ
ಬಣ್ಣಿಸುತಲಿ ಇರಲು ಬಿಡದೆ ನಿನ್ನನ್ನು


ಸ್ವಗತಗಳು ಸ್ವಾಗತಿಸಿವೆ ನಿನ್ನ ಹೆಬ್ಬೆರಳು
ಗೀರಿದ ಮೊದಲಾಕ್ಷರಕೆ ಬಡ್ತಿ ಬೇಡಿ
ಪ್ರಣಯವೇ ಪರಿಪಾಠವಾಗಿರಲು ಬದುಕಲ್ಲಿ
ಹೆಜ್ಜೆಜ್ಜೆಗೂ ಏನೋ ನಡೆದಂತೆ ಮೋಡಿ


ಗೀತೆಗೂ ಮುನ್ನ ಹೊಮ್ಮುವ ಆಲಾಪ-
-ದಂತೆ ನಿನ್ನ ಸಣ್ಣ ಕೋಪ
ವಿರಹಗಳು ಈಚೆಗೆ ಕಾಡದಾಗಿವೆ ವಿಧಿಸಿ-
-ಕೊಂಡು ಸ್ವತಃ ತಮಗೇ ಶಾಪ


ಹೊಂಗೆಯ ನೆರಳನ್ನು ಹೊಂದಿಸಿ ನಿನ್ನನ್ನು
ನನಗಾಗಿ ತಂದನಾ ಬ್ರಹ್ಮ
ಎಲ್ಲವ ಅರಿತಂತೆ ಪೂರೈಸುವ ನೀನೇ
ಪ್ರೇಮ, ಕಾಮವನುಣಿಸಿದಮ್ಮ!!


                                          - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩