ಈ ಚಳಿಗಾಲದ ರಾತ್ರಿಗಳು....

ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಮೈ ಸುಡುತ್ತವೆಂದರೆ
ಒಳಗೊಳಗೇ ಕರಗಿಸುತ್ತ
ಸುತ್ತ, ಮುತ್ತ ಮಿರುಗಿಸುತ್ತ
ಒಂಟಿತನವ ಮರುಗಿಸುತ್ತ
ಆಸೆಗಳ ಒರಗಿಸುತ್ತ
ಎತ್ತ ಸಾಗಲಿಕ್ಕೂ ಬಿಡದೆ
ಇತ್ತ ಸಾಯಲಿಕ್ಕೂ ಕೊಡದೆ
ನಿದ್ದೆಗೊಡದೆ ಕಣ್ಣುಗಳ
ಜ್ವಲಿಸಿ, ಜ್ವಲಿಸಿ ಕಾಡುತವೆಈ ಚಳಿಗಾಲದ ರಾತ್ರಿಗಳು
ಅದೆಷ್ಟು ಸ್ತಬ್ಧವೆಂದರೆ
ನಿಚ್ಚಲಗೊಳಿಸುತ್ತ ಇರುಳ
ಹೆಚ್ಚಳಗೊಳಿಸುತ್ತ ವಿರಹ
ಕುಹುಕವಾಡುತ್ತ ತನ್ನ
ಬೆಂದ ಬೇಳೆ ಬೇಯಿಸುತ
ಅತ್ತ ಮಂಜ ಪರದೆ ಮಾಡಿ
ಇತ್ತ ಕೊಂಚ ಪಳಗದಂಥ
ಗರಡಿಯಲ್ಲಿ ಇರಿಸುವವು 

ಸುಳುವೂ ನೀಡದಂತೆ ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಭಾವುಕವೆಂದರೆ
ಚಂದಿರನೊಡನಾಟದಲ್ಲಿ
ಮಿಂದೇಳುವ ಮನಸ ಕೊಟ್ಟು
ಹತ್ತಿರ ಇರುವವುಗಳಿಗೆ
ಎತ್ತರದ ಸ್ಥಾಯಿ ದೊರೆತು
ಮತ್ತೇರಿಸಿ, ಮದವೇರಿಸಿ
ಹದವಾಗಿಸಿ ಹೃದಯವನ್ನು
ಹರಿಬಿಡುವುದು ನಿಮಿಷದಲ್ಲಿ
ಕರಗಿಸಿ ನೀರಾಗಿಸಿಈ ಚಳಿಗಾಲದ ರಾತ್ರಿಗಳು
ಅದೆಷ್ಟು ಅಗಣ್ಯವೆಂದರೆ
ಜಪಮಾಲೆಯ ಬೀಜಾಕ್ಷರ
ಕೂಡಿ ಕೂಡಿ ನೀಳವಾದ
ಕವಿತೆಯೊಂದ ಕಟ್ಟಿಕೊಂಡ
ಧ್ಯಾನಿಯೊಬ್ಬನಾಗಿಸುತ್ತ
ಬೇನೆಗೆ ಬೇರೆಯದ್ದೇ
ಉಪಮೆಗಳ ಉಪಹಾರವಿತ್ತು
ಬಿಮ್ಮನೆ ಬದುಕಿದ ಬುದ್ಧಿಯ
ಕ್ಷಣಾರ್ಧದಲ್ಲಿ ಚುರುಕುಗೊಳಿಸಿ
ಲೆಕ್ಕ ತಪ್ಪಿ ಬಿಡುವುದುಈ ಚಳಿಗಾಲದ ರಾತ್ರಿಗಳು
ಅದೆಷ್ಟು ರಮ್ಯವೆಂದರೆ
ಇಲ್ಲದ ಜಗವೊಂದ ತಾನು
ಇಹುದೆಂದು ನಂಬಿಸಿ
ಒಳ ತಳಮಳಗಳ ಅಳೆದು
ನೇರ ನೇರ ಬಿಂಬಿಸಿ
ಖಾಲಿತನದ ಮನದ ತಣಿಗೆಗೆ
ಸವಿಯೆ ಮಧುವ ಉಣಬಡಿಸಿ
ಎಲ್ಲ ಬಿಡಿಸಿ ಒಗ್ಗೂಡಿಸಿ
ಒಲೈಸಿ ತಿಳಿಸುವುದು
ಎಲ್ಲ ಪೂರೈಸುವುದು
ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಗೌಪ್ಯವೆಂದರೆ
ಓದಿಕೊಳ್ಳುವಂತದಲ್ಲ
ಕೊಂಡು ಓದುವಂತದಲ್ಲ
ಹಂತ ಹಂತವಾಗಿ ತೆರೆದು
ಮತ್ತೆ ಎಲ್ಲೋ ಮರೆಯಾರಿ
ಸಾಗರದ ಅಬ್ಬರದಲಿ
ಸಣ್ಣದೊಂದು ತೊರೆಯಾಗಿ
ಸೆರೆಯಾಗಿ, ಬಿಡುಗಡೆ
ಇದ್ದೂ ಇಲ್ಲದಂತಾಗಿ
ಇದ್ದಷ್ಟೇ ಸೊಗಸಾಗಿ
ಎದುರು ನೋಟಕೂ ಮೊದಲೇ
ಸಿರಿಯಾಗಿ ದಕ್ಕುವುದು!!                         - ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩