Thursday 17 December 2015

ಮೋಹದ ತೀರ್ಪು

ಕಾಡಿಗೆಯ ಸಣ್ಣ ಎಳೆ
ಕಣ್ಣಂಚಿನ ತುಂಬ
ಎಂಥದೋ ಸಂಚನು ಹೂಡುತಿಹುದು
ಜುಮುಕಿಯ ಉಯ್ಯಾಲೆ
ಮುಂಗುರುಳ ಬೆನ್ನಲ್ಲೇ
ಏನನೋ ಪಿಸುಗುಡುತ ನಾಚುತಿಹುದು



ಇಲ್ಲೆಲ್ಲೋ ಕಂಡದ್ದು
ಇನ್ನೆಲ್ಲೋ ಗೋಚರಿಸಿ
ಯಾರೋ ದೋಚದೆ ಬಿಟ್ಟ ಹೆಜ್ಜೆ ಗುರುತು
ಕಂಬ ಕಂಬಗಳೊಳಗೆ
ನಿನ್ನ ಬೆರಳಿನ ಬಿಂಬ
ರಿಂಗಣಿಸಿತು ಇಂಪು ನಿನ್ನ ಬೆರೆತು



ಯಾವ ಸಂಗತಿಯಲ್ಲೂ
ಸಂಗಾತಿ ನಿನ್ನ ಮುಖ
ಯಾರ ಬಳಿ ಹೇಳಿಕೊಳ್ಳಲಿ ನೋವ
ಸುಮ್ಮನೆ ಇದ್ದರೂ
ಪ್ರತಿಧ್ವನಿಸುತಿದೆ ಮತ್ತೆ
ಬಿಟ್ಟೂ ಬಿಡದಂತೆ ಮಧುರ ಭಾವ



ಬೆಳಕ ಬೆಳಗುವ ನಿನ್ನ
ಬೆಳದಿಂಗಳಂಥ ಮೊಗ
ಬಳಿಕ ಮಾಸಿದರಿಲ್ಲ ಇರುಳಿಗರ್ಥ
ನನ್ನ ಹೊರತು ನಿನ್ನ
ಯಾರೂ ನೋಡದ ಹಾಗೆ
ಕುರುಡಾಗಲೆನ್ನಲದು ಅಲ್ಪ ಸ್ವಾರ್ಥ



ಸಾಕು ಮಾಡಿದರಲ್ಲಿ
ಸಾಕಾಗುತಿಲ್ಲ ಇದು
ಇನ್ನೂ ಬೇಕೆನ್ನುವ ಹುಚ್ಚು ಬಯಕೆ
ಮುಪ್ಪಾಗದಿರಲಿ ತಾ
ತಪ್ಪುಗಳ ಸರಣಿಗೆ 
ವಯಸು ಕುರುಡೆನ್ನುವರು ಇದಕೇ!!

                                      
                                    - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...