ಅಹಮ್ಮುಗಳಾಚೆ

ಕ್ಷಮಿಸು ಗೆಳತಿ
ಅತ್ತಾಗ ಕಣ್ಣೀರು ಬರದಾಯಿತು
ಹಿಂದೆ ಇಟ್ಟ ಆಣೆ ಬರಿದಾಯಿತು
ನೋವು ಕೂಡ ಶಪಿಸಿ ದೂರುಳಿಯುವ ವೇಳೆ
ಗಾಯಕ್ಕೆ ಸಂತಾಪ ಸಿಗದಾಯಿತು


ನಿನ್ನ ಕಣ್ಣೀರ ಬಿಸಿ
ಬೆಚ್ಚಗಾಗಿಸಿತೆನ್ನ ಬೆರಳುಗಳ,
ಅದು ಅಷ್ಟೊಂದು ಬೇಯಲು
ಕಾರಣ ನಾನೇ?
ಅಥವ ನಾನೆಂಬ ಅಹಮ್ಮೇ?!!


ಯಾವ ದಿಂಬಿಗೆ ಕನಸನುಣಿಸಿದೆಯೋ
ಅದೇ ದಿಂಬಿಗೆ ಕಂಬನಿ?
ಅರ್ಥವಾಗದ ಗೀಟು ಎಳೆಯಿತು
ನಿನ್ನ ಕಣ್ಣ ಲೇಖನಿ
ಓದೋ ಶಿಕ್ಷೆ ಹೊರತು ಬೇರೆ
ಕಠಿಣವಾದುದ ವಿಧಿಸಿ ನೋಡು!!


ಮಾತು ಮುಳ್ಳಿನ ಹಾಸಿಗೆ
ಸಲ್ಲದು ಹೊತ್ತಿಗೆ
ಇರುಳು ಮುಳುಗಿ ಬೆಳಕು ಹರಿಯಲಿ
ತಾಳ್ಮೆ ಇರಲಿ ತಾಳ್ಮೆಗೆ
ಬಿಂಬಕಾಗಿ ಇಣುಕು ನೂಕಲು
ಒಡೆಯದಿರಲಿ ಒಲವ ಗಾಜು


ಜೋಗುಳಕ್ಕೆ ಮಂಪರು ಬಡಿದಿದೆ
ನಾಲಗೆ ಮುದುಡಿ ಮಲಗಿದೆ
ಕಣ್ಣು ತೇವದ ಕಡಲ ತೀರ
ಮತ್ತೆ ಮತ್ತೆ ನೆನೆದಿದೆ
ಹೊತ್ತು ಮುಳುಗಲಿ ಬೀಟ್ಟುಗೊಡುವ
ಕ್ಷಣವ ಅದರ ಪಾಡಿಗೆ!!


ನೋವು ಕೊಡದ ಪ್ರೀತಿಯನ್ನು
ಒಪ್ಪದವನು ಆದ್ದರಿಂದ
ಇಗೋ ಚೂರು ಸಹಿಸಿಕೋ
ಮುನಿಸು ನಾಳೆಗೂ ಉಳಿಸಿಕೋ!!


                               - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩