ನೆನಪಿಡು ಮರುಳೇ!!

ನಂತರದ ದಿನಗಳಿಗೆ ಅಂಜಿ
ಈ ದಿನವ ರಾಜಿ ಮಾಡಿದರೆ
ನೆನ್ನೆಗಳ ಗೋಜಲಲಿ ನಾವೆಲ್ಲಿ?
ನೆನಪುಗಳ ಬಾಗಿಲಿಗೆ ಹೂವೆಲ್ಲಿ?

ಹೆಜ್ಜೆ ಗುರುತುಗಳು ಹಿಂದೆ ಉಳಿದಿವೆ
ಮುಂದೆ ಪಯಣವ ಬೆಳೆಸೆ
ಪಯಣಕೆ ಅರ್ಥವೆಲ್ಲಿದೆ ಮರುಳೇ
ಹಿಂದಿರುಗಲು ಗುರುತ ಎಣಿಸೆ?

ಹಿತಕಾಗಿ ಜೊತೆಯಾಗಿ ನೆರಳು
ಗುರಿ ತೋರಲೇ ಚಾಚು ತೋರ್ಬೆರಳು
ನೀನೊಬ್ಬನೇ ನಿನ್ನ ವೈರಿ!!
ನೀನೇ ನಿನ್ನ ಕಾಯುವ ಗೆಳೆಯ!!

ಹೇಳಲು, ಕೇಳಲು ಆಧಾರ ಒಂದೇ 
ಆತ್ಮಸಾಕ್ಷಿಯೆಂಬ ಪಾವನ ಪೀಠ 
ನಿನ್ನಿಂದ ನೀನೇ ದೂರಾದರೆ 
ಯಾರು ತಪ್ಪಿಸಬಲ್ಲರು ಹುಡುಕಾಟ?

ಆಟಕೊಂದು ಗೊಂಬೆ, ನೀನೆ ಸೃಷ್ಟಿಸು 
ಹೆಸರಿಟ್ಟು ಕರೆ, ಕಣ್ಣೀರ ಒರೆಸು 
ಅಷ್ಟರಲ್ಲೇ ಉಳಿ, ನಿರಾಸೆ ಪಡದಿರು 
ಪ್ರತಿಸ್ಪಂದನೆಗೆ ಹಂಬಲಿಸಿ ಮರುಗದಿರು 

ಎಣಿಕೆ ಬೇಸರವ ತಂದು ಸಾಕನಿಸಬಹುದು 
ಉಸಿರು ಆಯಾಸದಲಿ ತೂಕಡಿಸಬಹುದು 
ನಿನಗೆಂದೇ ಒಂದು ಲಕ್ಷ್ಯವಿದೆ ನೆನಪಿಡು 
ನಾಳೆ ಉಳಿವಿಗೆ ಇಂದು ಅಳಿಯದ ಗುರುತಿಡು 

                                            --ರತ್ನಸುತ

Comments

  1. ವೈರಿಯಾದರೂ ಅದೇ ಗೆಳೆಯನಾದರೂ ಅದೇ - ಬಹಳ ಬುದ್ದಿವಂತಿಕೆಯಿಂದ ಸಂಭಾಳಿಸಬೇಕು ನಿಜ.
    ನಾವು ಮರೆತಿರುವ ಸತ್ಯ "ಹಿಂದಿರುಗಲು ಗುರುತ ಎಣಿಸೆ"

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩