Thursday, 26 September 2013

ಕೂಡಿಟ್ಟ ಹನಿಗಳು !!!

ಸಂಜೆ ಹೊತ್ನಾಗ್ 
ಬರ್ಯೋ ಪದ್ಯ 
ರುಚ್ಕಟ್ಟಾಗಿದ್ರುವೆ 

ಬೆಳ್ಗೆ ಹೊತ್ಗೆ 
ಹಳ್ಸೋಗೋದು 
ನೀನ್ ಓದ್ದೆ ಇದ್ದುದ್ಕೆ !!!
.....
ಹಿಂಗಾಗ್ತೈತ್ ಯಾಕೋ ಇತ್ತೀಚ್ಗೆ !!


***

ಫ್ಯಾನಿಗೆ ತಿರುಗುವುದು ಬೋರಾದರೆ 
ರಿಪೇರಿ !!
ದೇಹಕೆ ಉಸಿರು ಬೋರಾದರೆ 
ಬಂಬೂ ಸವಾರಿ !!


***

ನಿನ್ನ ಕಂಡಾಗ 
ಮರೆತ ಪದಗಳಲ್ಲಿ 
ಬರೆದ ಕವಿತೆಯ 
ಮೆಚ್ಚುವ ಮನ 
ಮೂರ್ಖ ವಿಮರ್ಶಕ !!!


***

ಕನಸೊಳಗೆ ಪಾತ್ರ ನಿರ್ವಹಿಸಿದವರಿಗೆ 
ಜೀತ ನೀಡುವಷ್ಟು ಹಣವಂತ ನಾನಲ್ಲ 
ಬೇಕಿದ್ದರೆ ಅವರವರ ಕನಸುಗಳಲ್ಲಿ 
ನನಗೊಂದು ಪಾತ್ರ ಕೊಟ್ಟು ವಜಾ ಮಾಡಿಕೊಳಲಿ !!


***

ಅವಳ ಒಂದು ಸೋಕಿಗೆ 
ನಾಕು ತಂತಿಯ ವೀಣೆ 
ನಾಕೇ ಬಾರಿ ಮೀಟಿಸಿಕೊಂಡು 
ಸುಮ್ಮನಾಯಿತು ...

ನಾಕಕ್ಕೇ ಸೀಮಿತಗೊಳಿಸಿದ 
ಸೃಷ್ಟಿಕರ್ತನ ಶಪಿಸಿ !!!


***

ಹಿಡಿಯಲು ಬೆಳಕು 
ಅಪ್ಪಲು ನೀರು 
ತಡೆಯಲು ಗಾಳಿ 
ಸವಿಯಲು ಮೌನ 
ವಾಡಿಕೆ ಆಗಿವೆ ಈ ನಡುವೆ !!!


***

ಮೆಟ್ಟಿಲೇರುವಾಗ ಎತ್ತರ ಅಳಿಯದೆ 
ಇಳಿಯುವಾಗ ಆಳ ನೋಡದೆ 
ಮುಂದರಿಯಲು ಕಪಿ ಮನಸು 
ಒಪ್ಪದ ಕಾರಣ ....

ಅತ್ಲಾಗೂ ಭಯ 
ಇತ್ಲಾಗೂ ಭಯ !!!


***

ಟೈಮ್ ಪಾಸ್ ಮಾಡೋಕೆ 
ಕಳ್ಳೆಕಾಯಿ ಕೊಳ್ಳಿ !!

ಸಿಪ್ಪೆ ಸುಲ್ಕೊಂಡು 
ಹೆಚ್ಗೆ ಟೈಮ್ ಪಾಸ್ ಆಗುತ್ತೆ 
ಕಮ್ಮಿ ತಿಂದು 
ಗ್ಯಾಸ್ ಟ್ರಬಲ್ಲೂ ತಪ್ಪುತ್ತೆ !!


***

ಕನಸಿಗೆ 
ಪುಷ್ಟಿ
ಕೊಟ್ಟದ್ದು 

ನಿಜ 
ಬದುಕಿನ 
ಬೇಸರ !!


***

ಚಂದ್ರನ 
ಮನೇಲಿ 
ಈವತ್ತು 

ಫುಲ್ 
ವೋಲ್ಟೇಜ್ 
ಕರೆಂಟು !!!


***

ದಾರಿಯುದ್ದಕ್ಕೂ 
ಸಾಲು-ಸಾಲು 
ಮರಗಳ ನೆಟ್ಟ ಅಜ್ಜಿ 
ಸತ್ತಾಗ 

ಆಕೆಯ ಅಂತ್ಯ ಸಂಸ್ಕಾರ 
ಮಷೀನ್ ಚಿತೆಯಲ್ಲಿ ನಡೆಸಲಾಯಿತು !!!


***

ಬೀಸೋ ಕಲ್ಲಿಗೆ ಸಿಕ್ಕಿ 
ನರಳಿದ ರಾಗಿಗೆ 

ಜರಡಿ, 
ರಾಜ ಗೌರವ ನೀಡಿ 
ಬೀಳ್ಗೊಟ್ಟಿತು !!!


***

ಹಾಲು-ಜೇನು ಬೆರೆತಾಗ ಬಾಳಲಿ 
ಸ್ಪೂನೊಂದು ಬೇಕು ಕಲೆಹಾಕಲು !!!


***

ಸಕ್ರೆ ಕದ್ದು ತಿನ್ನೋವಾಗ ಚನ್ನಾಗಿತ್ತು 
ಇವಾಗಿವಾಗ ಯಾಕೋ ಬೇಜಾರಾಯ್ತದೆ !!!


***

ಜೈಲಲ್ಲಿ 
ಕಂಬಿ ಎಣಿಸುತ್ತಿದ್ದವನಿಗೆ 
ತನ್ನ 
ಮಿಡ್ಲ್ ಸ್ಕೂಲ್ 
ಗಣಿತದ ಮೇಷ್ಟ್ರು ನೆನ್ಪಾದ್ರು !!


***

ತಮಟೆ ಏಟಿಗೆ 
ಕೆಪ್ಪನಾದ ಆತನ ಸಾವಿಗೆ 
ಮೌನಾಚರಣೆ ಆಚರಿಸುವ ಬದಲು 
ಬ್ಯಾಂಡ್ ಸೆಟ್ ತರಿಸಿ 
ಆತ್ಮವಂಚನೆ ಮಾಡಲಾಯಿತು !!


***

ಮೈ ಬೆಚ್ಚಗಾಗಿಸಿದ ಹೊದಿಕೆ 
ಬೆವರಿಳಿಸುವ ಕಾಲಕ್ಕೆ 
ಬೇಡವಾಯಿತು 
ಮತ್ತೊಂದು ಚಳಿಗಾಲ 
ಬರುವನಕ !!!


***

ನನ್ನ ಕನಸಿನ ವೇಘ 
ಬೆಳಕಿಗೂ ಹೆಚ್ಚು 
ಬಂದದ್ದು ನಿಜ 
ಕಂಡದ್ದು ನಿಜ 
ಆದರೂ ಅರ್ಥವಾದದ್ದು ಮಾತ್ರ 
ಐನ್ಸ್ಟೀನ್ ಫಾರ್ಮುಲಾದಷ್ಟೇ !!


***

ಐನೂರರ ಬಂದಾ ನೋಟಿಗೆ 
ಚಿಲ್ಲರೆ ಕನಸು ಬರಬಹುದೇ ??

ಅದಕ್ಕೆ 
ದೆಕ್ಕೊಂದು ಸಾಲ ಪಡೆದೆ 
ಏನೂ ಖರ್ಚಾಗದೆ !!!


***

ರಕ್ತದಂತೆ 
ಎಲ್ಲರೂ 
ಸಮಾನರು 
ಬಣ್ಣದಲ್ಲಿ 

ನಡುವೆ 
ಜಾತಿಯ 
ಅಡ್ಡ 
ಗೋಡೆ !!!


***

ಚಂದ್ರ 
ಕದ್ದು ನೋಡ್ತಲೇ 
ರಾತ್ರಿಯಿಡೀ ಎದ್ದಿದ್ದ 

ಸೂರ್ಯ 
ಎರಡು ಕೊಟ್ಟು 
ಮಲ್ಗಿಸ್ದ !!


***

ರಾತ್ರಿ ಬೀದಿ ದೀಪಗಳು 
ಬೆಳಗಿ ನಿಂತು 
ಚಳಿಗೆ ಬೆವರಿದ 
ರಸ್ತೆಗಳಿಗೆ 
ರೇಶಿಮೆ 
ವರ್ಸ್ತ್ರ ತೊಡಿಸಿವೆ !!


***

ದಿನಕ್ಕೊಂದು ರೂಪ ಬದಲಿಸುವ 
ಚಂದಿರನ 
ನವರಂಗಿ ಆಟದ ಹುಡುಗಿ 
ಮೆಚ್ಚಿದ್ದು 
ಅವನ ಮೌನವ ಕಂಡು !!


***

ನಲ್ಮೆಯ ದಿಂಬು 
ಕಣ್ಣಿನ ನಲ್ಲಿ 
ಕನಸಿನ ಚೊಂಬು 
ನಿದ್ದೆಗೆ ಕೊಳ್ಳಿ !!


***

ತೊಟ್ಟಿಡುವ ಉಪ್ಪರಿಗೆ 
ಹಸಿಗನಸು ಅದರಡಿಗೆ 
ಚಿಗುರು ಪೈರಿನ ನಾಟಿ 
ಮಾಡಲೆಂತೋ ಕಡೆಗೆ !!!


***

ರಾತ್ರಿಯಿಡೀ 
ತಂಪುಗಾವಲ್ಲಿ 
ಸುಖಿಸಿದ 
ಇಳೆಗೆ 

ಈಗ 
ತಾಪಗಾವಲಿನ 
ಕಿರಿಕಿರಿ !!!


***

ಬಣ್ಣ ಬಳಿದು 
ತನ್ನ ಜೀವನದ 
ಕೊನೆ ಪ್ರದರ್ಶನವ 
ನೀಡುತ್ತಿದ್ದವ 
ಸಂಭಾಷಣೆ ಮರೆತ 

ತನ್ನ ಮೊದಲ 
ಪ್ರದರ್ಶನದಂತೆಯೇ !!!


***

ಮುಳ್ಳಿನ ಕೈಯ್ಯಲ್ಲಿ 
ಚುಚ್ಚಿಸಿಕೊಂಡು 

ಮುಳ್ಳೇ ಚುಚ್ಚಿತು ಅನ್ನುವುದು 
ಎಂಥ ನ್ಯಾಯ ??


***

ಒತ್ತು ಗುಂಡಿಗಳೀಗ 
ಸ್ಪರ್ಶ ರಟ್ಟುಗಳು 

ಸೂಕ್ಷ್ಮ ಮೈ 
ವಿಪರೀತ ಶರತ್ತುಗಳು !!!


***

ಕಣ್ಣುಜ್ಜಿಕೊಂಡರೆ ಏನು ಬಂತು 
ಕನ್ನಡಕ ತೊಡದ ವಿನಃ 
ಕನಸುಗಳು ಅಸ್ಪಷ್ಟ !!!


***

ನೀರಿಗೆ ಬಿದ್ದ ಇರುವೆಗೆ 
ಮಳೆ ಹನಿ ಎಬ್ಬಿಸಿದ 
ಗುಳ್ಳೆಯ ರಕ್ಷೆ 

ಮತ್ತದೇ ಹನಿಯಿಂದ
ಜೀವಕೆ ಶಿಕ್ಷೆ !!


***

ತವರಿನ ತೊಟ್ಟಿಲು 
ತುಕ್ಕು ಹಿಡಿವ ಮುನ್ನ 
ತೂಗಬೇಕು ಮತ್ತೆ ಅಂದಳಜ್ಜಿ 

ಎಲೆಯಡಿಕೆ ಸುಣ್ಣವನು ಕುಟ್ಟಿ ಜಜ್ಜಿ !!


***

ಕೂತಲ್ಲಿ ಕುಟ್ಟುತ 
ಇಷ್ಟಕ್ಕೆ ಕಟ್ಟುತ 
ಬರೆಯೋಕೆ ಬಿಟ್ಟೆನು 
ಒಂದು ಚುಟುಕ 

ಸ್ಥಳ ನೀಡದೆ ಉಳಿಯೆ 
ಮನದ ಘಟಕ !!


***

ಮೊದಲ ತುತ್ತು 
ಹಸಿವ ದಾಟಿಸುವ 
"ಬರವಸೆ"

ಕೊನೆಯ ತುತ್ತು 
ಕೊಟ್ಟ ಮಾತಿಗೆ 
"ಸಾಕ್ಷಿ" !!


***

"ಕನಸು"
ನಮ್ಮದೇ ಥಿಯೇಟರಲ್ಲಿ 
ನಮ್ಮದೇ ಚಿತ್ರವನ್ನ 
ನಾವು ಮಾತ್ರವೇ 
ನೋಡ ಬಹುದಾದ 
ಪ್ರೀಮಿಯರ್ ಶೋ 

ಹಿಟ್ಟೋ, ಫ್ಲಾಪೋ 
ನಾವೇ ಡಿಸೈಡ್ ಮಾಡ್ಬೇಕು 
* ಅರ್ಥ ಆದ್ರೆ *


***

"ಆಕೆ"
ಮುಚ್ಚಿಟ್ಟ ಅಷ್ಟೂ ದಿನ 
ಮೂಸುತ್ತಿದ್ದ ಜನ 
ಬಿಚ್ಚಿಟ್ಟ ಕೂಡಲೇ 
ಮುಗಿ ಬಿದ್ದರು 

ಬಂಕೆ ಕೈಗಳ ಮೀಟಿ 
ಕಿತ್ತೆಳೆದು ಚಪ್ಪರಿಸಿ 
ಕಡೆಗೆ ಆಕೆಗೆ 
"ಹಲ(ಳ)ಸು" ಹೆಸರಿಟ್ಟರು !!!


***

ಒಣ ಗರಿಕೆ ಹುಲ್ಲು 
ಕಾಡ್ಗಿಚ್ಚು ಎಬ್ಬಿಸಿತು 
ಸುಟ್ಟು ನೆರಳಿತ್ತ 
ಆ ದಟ್ಟ ಮರವ 

ಉಚ್ಚತೆಯ ಸಾರಲು 
ನೀಚ ಕೃತ್ಯವ ಎಸಗಿ 
ಗುರಿಯಿಟ್ಟು ಬಿಟ್ಟಿತು 
ಕೇಡು ಶರವ !!!


***

ಕಂಪನಿ ಬಿಟ್ಟು ಕಂಪನಿಗೆ ಹಾರುವ 
"ಟೆಕ್ಕಿ"
ಮರದಿಂದ ಮರಕೆ ಜಿಗಿಯುವ 
"ಮಂಗ"
ತೃಪ್ತರಾಗೋದು ಅತಿಶಯ !!


***

ಮುಸ್ಸಂಜೆ ಗಾಳಿಗೆ 
ಮನ್ಸನ್ನ ತೆರ್ದಾಗ 
ಜೋತಾಕಿದ್ ಗಂಟೆ 
ಓಲಾಡ್ತಾ ಎದ್ದು 
ಒಂದೇ ಧಾಟೀಲಿ 
ಸದ್ದು ಮಾಡ್ತಿತ್ತು 

ಹಿಂದೇನೆ ಪದ್ಗೊಳು 
ಎದ್ದೆದ್ದು ಕುಣಿತಿತ್ತು !!!


***

ಬರ್ದು ಬರ್ದು 
ಸವ್ದೋದ್ 
ಬೆರ್ಳು 

ಈಗ 
ಕುಟ್ತಾ 
ಸವ್ದೋಯ್ತು !!


***

ಉಸ್ರು ಕಟ್ದಾಗ 
ಅವ್ವ ನೆನ್ಪಾಯ್ತಳೆ 

ಎದೆ ನೀವಿ 
ಉಸ್ರು ಕೊಟ್ಟು 
ನಿಟ್ಟುಸ್ರು ಬಿಟ್ಟಿರೋಳು !!


           --ರತ್ನಸುತ 

1 comment:

  1. Super saalugalu! idi sankalanavella onde sati haakida haagide? :)

    ReplyDelete

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...