Friday 20 September 2013

ನಾನ್ಯಾರು? ನಿನ್ನವನಾ ??

ಯಾವ ಊರು, ಏನು ಹೆಸರು 
ಹೇಗೆ ಹೇಳೋದು ನಾನೀಗ? 
ನನ್ನ ಗುರುತು, ನಾನೆ ಮರೆತೆ 
ಹೀಗೆ ಆಗಿದ್ದು ಯಾವಾಗ?
ಯಾರ ಕೂಗು, ಯಾವ ಮಾತೂ 
ಕೇಳದಾಗಿದೆ ಈಗೀಗ
ಹಾಗೆ ಚೂರು, ನಕ್ಕು ನೋಡು 
ಸತ್ತು ಬದುಕುವೆ ಆವಾಗ 

{ಬಾಳಿಗೆ ಬಣ್ಣವ ತುಂಬುವ ಕನಸಿಗೆ 
ಬೇಕಿದೆ ನಿನ್ನಯ ಕುಂಚದ ಕಾಣಿಕೆ}                                   [೧]


ಚಿಗುರು ಹಬ್ಬಕೆ ನೀನು ಕಾರಣ 
ಸೋಕಿದಾಗ ತರು ಲತೆಗಳ 
ಪೊಗರು ಹೂಗಳು ಸಲಿಗೆ ಮೀರಿವೆ 
ಇಳಿಸುವುದು ಚೂರು ಅಸದಳ  
ಮಂದಹಾಸಕೆ ಮೂರ್ಛೆ ಹೋದೆನು 
ಎಚ್ಚರ ನೀ ನುಡಿಯಲು
ಮನದ ಆಸೆಯು ಸಾವಿರಾರಿದೆ 
ಕಷ್ಟ ಎಲ್ಲವ ತಡೆಯಲು                                                   [೨] 


ತಾಳ ತಪ್ಪಿದೆ ಹಾಳು ಹೃದಯವು 
ನಿನ್ನ ಹೆಸರ ಪಿಸುಗುಟ್ಟುತ 
ರಾತ್ರಿ ಬೀಳುವ ಕನಸಿನೊಳಗೆ ನೀ 
ಬರಲೇ ಬೇಕು ಹಠ ಮಾಡುತ 
ನನ್ನ ಹಾಡಿಗೆ ನೀನೆ ಪಲ್ಲವಿ 
ನೀನೇ ಚರಣ, ಮುಕ್ತಾಯವೂ 
ಮೋಡ ಕರಗುವ ಸುಳಿವು ಸಿಕ್ಕರೆ 
ಭೂಮಿಗೆಲ್ಲ ಆದಾಯವೂ                                                [೩]

                    
                         --ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...