ಜೀವನ ಪುಟ!!

ನಡುವೆಲ್ಲೋ ಒಂದು ಹಾಳೆ 
ನಾಳೆಯ ಗುಟ್ಟಿನ ಹಾದಿ
ನೆನ್ನೆಯ ಹಳೆಗಳಿಗೆ ಗುರುತಿಟ್ಟು 
ಮರೆತಂತೆ ಮುಂದೆ ಓದಿ 

ಹರಿದವೆಷ್ಟೋ, ಬರೆದವೆಷ್ಟೋ 
ಓದದೆ ಹಾಗೆ ಉಳಿದವೆಷ್ಟೋ 
ದೋಣಿ ಮಾಡಿ ಹರಿ ಬಿಟ್ಟವೆಷ್ಟೋ 
ಪ್ರಾಣವನ್ನು ಮಡಿಚಿಟ್ಟವೆಷ್ಟೋ 

ಸುಳಿವನು ನೀಡದೆ ತಿರುವನು ಪಡೆದ 
ಕಥೆಗಳು ಉತ್ತಮ ಅನಿಸುವುದೇನೋ 
ರಾತ್ರಿಯ ಕನಸು ನಿಜವನು ಪೀಡಿಸಿ 
ತಾನೇ ಸಕ್ರಮವಾಗಿಹುದೆನು?

ತಪ್ಪಿನಕ್ಷರವ ತಿದ್ದಿ ಬರೆದು 
ಮುದುಡಿದ್ಹಾಲೆಗಳ ಕಸದಲ್ಲಿ ತೆರೆದು 
ಒಂದೆಡೆ ಮರೆತವೇ ನೆನಪಲ್ಲಿ ಉಳಿದವು 
ಮತ್ತೊಂದೆಡೆ ನೆನಪಿದ್ದವೆ ಮರೆತವು  

ಇಂದಿನ ಪುಟ, ನಾಳೆಗೆ ಹಿಂದಿನ ಪುಟ 
ಮುಂದೊಂದು ಪುಟವಿಹುದು ಹಿಂದೆಂದೂ ಇರದಂತೆ 
ಅಂದುಕೊಂಡಂತೆ ಬರೆದವು ಕೆಲವು ಆದರೆ 
ಸ್ವೀಕರಿಸಬೇಕಿತ್ತು ಕೆಲವ ಇದ್ದಂತೆ 

ಒಮ್ಮೆಲೆ ರಾಶಿ ಪುಟ ಹೊರಳಿಸುವ ಆಸೆ 
ಆದರಲ್ಲಿ ಮತ್ತೆ ಹಿಂದಿರುಗಲಾಗದ ಭಯ 
ಇದ್ದಲ್ಲೇ ಬಿಕ್ಕಿ, ಅಲ್ಲೇ ಚೂರು ನಕ್ಕು 
ನಾಳೆಯ ಕನವರಿಸುವುದೇ ನಿಜದ ನಿಯಮ 

                                         --ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩