ಅವಳಂದಕೆ ಸೋಲದೇ ಗೆಲ್ಲಲಾರೆ !!!

ಮಳೆಬಿಲ್ಲೇ ಉಡಿಸಿದೆ ಸೀರೆ 
ಹಾಲಲ್ಲೇ ಅದ್ದಿದ ನೀರೆ 
ಹೂ ಬನವೇ ಸಾಗುವ ದಾರಿ 
ಬೆಳದಿಂಗಳ ಹೊಳಪಿನ ಚಹರೆ 
ಮಂದಾರವೇ ಸಂಪಿಗೆ ಮೂಗು 
ಅದಕಂಟಿದ ಬೊಟ್ಟಿನ ಮಿನುಗು 
ಆ ಕಣ್ಣಿನ ಕಾಡಿಗೆ ಲೇಪ 
ಸೌಂದರ್ಯಕೆ ಸುಂದರ ರೂಪ 

ಕೆಂದಾವರೆ ಕೆನ್ನೆಯ ಮೇಲೆ 
ಮುಂಗುರುಳಿನ ರಿಂಗಣ ಸದ್ದು 
ಸದ್ದಿಲ್ಲದೆ ಉಕ್ಕಿದೆ ಚೂರು 
ನಗು ಬಾಗಿಲು ತುಟಿಯನು ಕದ್ದು  
ಉಬ್ಬೇರಿಸುವಾಗಲೇ ನೋಡು 
ಆಕಾಶವು ನಾಚಿದೆ ಅಲ್ಲಿ 
ಇರುಳಲ್ಲಿಯ ಚಂದಿರ ಕಂಡು 
ತಾರೆಗಳನು ಬಿಟ್ಟನು ಚೆಲ್ಲಿ 

ಆ ಚಿನ್ನದ ಬೈತಲೆ ಬೊಟ್ಟು 
ಮದವೇರಿಸೋ ಮೊಗ್ಗಿನ ಜುಟ್ಟು 
ಆ ಸಾಗರ ಕಣ್ಣಿನ ಮಡಿಲು 
ಕೂಡಿಟ್ಟಿದೆ ಸಾವಿರ ಗುಟ್ಟು 
ಆ ಕುತ್ತಿಗೆ ಜಾಡಿನ ಕೊರಳು 
ಅದ ಸುತ್ತುವರೆದ ಸರ ಮಾಲೆ 
ಮರೆತಿದ್ದೆ ಹೇಳಲು ಆಹಾ 
ಗುಡಿ ಗಂಟೆಯ ಹೋಲುವ ಓಲೆ 

ಪಾರದರ್ಶಕ ಹಾದಿಯ ಎದೆ 
ಆಕರ್ಷಕ ನಡುವಿನ ಪೊದೆ 
ಬಳುಕು ಬಳ್ಳಿಯ ಮೀರಿಸಬಲ್ಲ 
ಸಾಟಿಯಿಲ್ಲದ ಹಂಸದ ನಡೆ 
ಒಂದಿಡೀ ಕವನ ಸಂಕಲನ 
ಬರೆಯ ಬಹುದಾದ ಚೊಕ್ಕ ಬೆನ್ನು 
ಸಾಕು ಸಾಕೆಂದು ತಡೆದರೂ 
ಅವಳನ್ನೇ ಬಯಸುವ ತಿರುಕ ನಾನು 

ಕಾಲ್ಬೆರಳ ಗೀಚಲ್ಲಿ ಚಿತ್ರ 
ತೋರ್ಬೆರಳು ಕರೆಯೋಲೆ ಪತ್ರ 
ಗೋರಂಟಿ ಬಣ್ಣವು ತಾನೇ 
ದಾಹ ದಾಟಿದ ಮನ್ಮಥ ಶಿಶು 
ಒಟ್ಟಾರೆ ಇವಳೊಂದು ಭೂಮಿ 
ನಾನಿವಳ ಪೂಜಿಸುವ ಪ್ರೇಮಿ 
ಹೆಸರಿಟ್ಟು ಕರೆಯಲಾರೆ ಇವಳ
ಹೆಸರೇನೆಂದು ಕೇಳದಿರಿ ಸ್ವಾಮಿ !!!

                               --ರತ್ನಸುತ 

Comments

  1. "ಒಂದಿಡೀ ಕವನ ಸಂಕಲನ
    ಬರೆಯ ಬಹುದಾದ ಚೊಕ್ಕ ಬೆನ್ನು "
    ರಸಿಕ... ರಸಿಕ... ರಸಿಕ... :-D

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩