ಮರುಜನ್ಮ !!

ಪುಡಿಗಾಸು ಹುಟ್ಟಿಲ್ಲ
ಸಹವಾಸ ಸರಿಯಿಲ್ಲ 
ಉಪವಾಸ ಗತಿಯೊಂದೆ ನನಗಾಯಿತು 
ಮನೆಗೆ ಹೊರೆ ಆಗೋದೆ 
ಬೀದಿ ನಾಯಿಯ ಪಾಡು 
ತಂಗಲು ರೊಟ್ಟಿಗೂ ಅಳಬೇಕಾಯಿತು 

ನನ್ನವರು ತನ್ನವರು 
ಯಾರಾದರೇನಂತೆ 
ಮೂರ್ಕಾಸಿನ್ಮರ್ಯಾದೆ ಸಿಗುತಲಿಲ್ಲ 
ದಂಡ ಪಿಂಡನ ಪಟ್ಟ 
ಕಟ್ಟುವರು ಎಲ್ಲೆಲ್ಲೂ 
ಬದಲಾದೆ ಅಂದೊಡನೆ ನಗುವರೆಲ್ಲ 

ದೇವರಿಗೂ ಸಲಿಗೆಯೇ 
ಸೋಲೊಂದೇ ನೀಡಿದನು 
ಗುರಿ ಕಾಣುವ ದಾರಿ ಇನ್ನೂ ದೂರ 
ಸಿಹಿಯಾದ ಮಾತಲ್ಲಿ 
ಕಹಿ ನನ್ನ ಪಾಲಾಯ್ತು 
ಒಮ್ಮೊಮ್ಮೆ ಅಂತೂ ತುಂಬಾ ಖಾರ 

ಇಂದು ಎಲ್ಲವ ಸಹಿಸಿ 
ನೆನ್ನೆ ನೆನಪಿಗೆ ಇಂದು 
ನಾಳೆಗಳ ಲಕ್ಕವನು ತಪ್ಪಬಹುದು 
ಹುಟ್ಟು ಸಾವು ಮಾತ್ರ 
ಇಲ್ಲಿರುವುದಲ್ಲ 
ಸ್ವರ್ಗ ನರಕಗಳೆರಡೂ ಇಲ್ಲೇ ಇಹುದು 

ಓಡುವ ಛಲವಿಲ್ಲ 
ನಿಲ್ಲುವ ಬಲವಿಲ್ಲ 
ಕುಂಟುತ ತೆವಳುತ ಸಾಗಿ ಪಯಣ 
ಬೇಕಿದ್ದು ಬೇಕಾದ ಹಗೆ 
ಬರಲಾರದೆ 
ಚಕಿತಗೊಳಿಸಲು ಕಾದಿಹುದೇ ಮರಣ ?

ಹಾಳೆಯೂ ತುಂಬಿತ್ತು 
ಶಾಯಿಯೂ ಮುಗಿದಿತ್ತು 
ಇನ್ನೇನಿದ್ದರೂ ಕೊನೆ ಸಾಲ ಸರದಿ 
ಮತ್ತೊಂದು ತಿರುವು 
ಮಗದೊಂದು ಆಯ್ಕೆ 
ಅವತಾರ ಬದಲಿಸಿಕೊಳ್ಳುವ ಅವಧಿ 


                              -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩