ನೀ ಅಮೃತ ಧಾರೆ!!

ಸದಾ ಬೆನ್ನ ನೇವರಿಸುವ 
ಬಿಡಿ ಕಪ್ಪುಕೂದಲಿಗೆ
ಇಂದೇಕೆ ಮೊಗ್ಗು ಜಡೆಯ ಯೋಗ ?
ಮೌನದಲ್ಲೇ ಇಷ್ಟು ದಿನ 
ಇಷ್ಟವಾದ ಕಣ್ಣು
ಕಾಡಿವೆ ಕಾಡಿಗೆಯ ಹಚ್ಚಿದಾಗ !!

ನೀ ಕೂತ ಜಾಗದಲಿ 
ಚೆಲ್ಲಾಪಿಲ್ಲಿ ಸರಕು 
ನನ್ನ ಪಾಲಿಗೆ ಸಿಕ್ಕ ಜೋಡಣೆಯ ಕಸುಬು 
ನಿನ್ನ ನೆರಳಿನ ಸುಳಿವು 
ಆಹ್ಲಾದಕರ ಆಘಾತ   
ನಿನ್ನೆದುರು ಮಾತುಗಳು ಹಾಗೇ ತಬ್ಬಿಬ್ಬು 

ಆ ಹಣೆಯ ಚಿತ್ತಾರ 
ಬಳುಕು ರೇಖೆಯ ಕೊನೆಗೆ 
ನಡುಗಿಯೂ ಇಟ್ಟ ಅಪ್ಪಟ ಚೊಕ್ಕ ಚುಕ್ಕಿ 
ಬೈತಲೆಯ ಅಂಚಿಂದ 
ನೇರ ಕೆನ್ನೆಗೆ ಬಿದ್ದ 
ಮುಂಗುರುಳ ರಿಂಗಣಕೆ ಮುತ್ತೊಂದೇ ಬಾಕಿ 

ಕಾಲ್ಬೆರಳ ಉಗುರಿಗೆ 
ಅರೆ ಅಂಟಿದ ಗೋರಂಟಿ  
ನಾ ತುಂಬಲೇ ಆ ಮಿಕ್ಕ ಚೂರು 
ನೀ ತೋರಿ ಮುಗಿಸಿದೆ 
ಉಸಿರಲ್ಲೆ ಮುನಿಸನ್ನು 
ನಾ ಹೇಳದ ವಿಷಯ ಸಾವಿರಾರು 

ನನ್ನ ಹಾಸ್ಯಕೆ ನಿನ್ನ 
ನಗುವೆಂಬ ಸನ್ಮಾನ 
ಗುಟ್ಟಾಗಿ ನಡೆಸಿತು ಜೀವದಾನ 
ಹಂಚಿಕೆಯ ಉಸಿರಲ್ಲಿ 
ನನ್ನ ಹೃದಯದ ಉಳಿವು 
ನೀನಿಲ್ಲದೆ ದಂಡ ಒಂಟಿ ಪ್ರಾಣ 

ದೂರಾದ ಹೆಜ್ಜೆಜ್ಜೆ
ದಾರುಣ ಕಥೆಗಳು  
ನೀ ಹೇಳಬೇಕಿಲ್ಲ, ನಾ ಕೇಳಬೇಕಿಲ್ಲ 
ನಿನ್ನೆದೆಗೆ ತಲೆಯೂರಿದಂತೆ 
ಭಾವಿಸಿದರೂ 
ಕೆಟ್ಟ ಕನಸುಗಳು ಸುಳಿಯುವ ಮಾತಿಲ್ಲ !!

                                 --ರತ್ನಸುತ 

Comments

  1. " ಹಂಚಿಕೆಯ ಉಸಿರಲ್ಲಿ
    ನನ್ನ ಹೃದಯದ ಉಳಿವು "
    ಒಲವಿನ ನಿಜ ಸಾಕ್ಷಾತ್ಕಾರ ಇವೆರಡು ಸಾಲುಗಳು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩