ಕಾಡಿ, ಬೇಡಿ ಒಂದಿಷ್ಟು ಹಾಡಿ !!


ತುಂಬು ಬಿಂದಿಗೆಯಲ್ಲಿ ತಂದೆ ನೋಡು 
ನನ್ನೆದೆಯ ಭಾವ ಕೊಳದ ಒಂದು ಪಾಲು 
ಇಷ್ಟಕ್ಕೇ ಬೆಚ್ಚುವೆ ಏಕೆ ಬಾಲೆ ?
ಇದು ಕಣಜದೊಳಗಿನ ಕೇವಲ ಒಂದು ಕಾಳು 

ಹಾಳೆಗಟ್ಟಲೆ ಬರೆದ ಕರೆಯೋಲೆಯ ನೀ 
ಓದಲಾರದೆ ಬೇಸತ್ತರೆ ಹೇಗೆ ?
ಕೇವಲ ವೇದನೆಯ ಮರೆಸಿದ ಸಾಲಿದು 
ಮೂಲ ಅಕ್ಷರಗಳೊಳಗೆ ಉಳಿದಿವೆ ಹಾಗೇ 

ಒಂದು ಮಾತಿಗೇ ನೀನು ನೆಲವನ್ನ ಕೊರೆದೆ 
ಹೆಬ್ಬೆರಳ ಗೀರಿ ನಾಚಿಕೆಗೆ ಹಾರಿ 
ಬಚ್ಚಿಟ್ಟ ಬಯಕೆಗಳ ಬಿಚ್ಚಿಟ್ಟು ಹೊರಟರೆ 
ಗಲ್ಲ ಕೆಂಪಾಗಿಸಿಬಿಡುವೆ ಮಿತಿ ಮೀರಿ 

ಅನುಭವವ ಹಂಚಿದರೆ ಕಟ್ಟು ಕಥೆಯೆಂದೆ 
ಕಥೆಗೆ ಮನ ಸೋತು ನಿಜವಂದುಕೊಂಡೆ 
ಕಥೆಗಾರ ಮೊದಲೇ, ಹುಟ್ಟಿಸುವೆ ನೂರಾರು 
ಬೇಡವೆಂದು ಇದ್ದಂತೆಯೇ ಉಳಿದೆ 

ಉಡುಗೊರೆಯ ಏಟಿಗೆ ನನ್ನವಳಾಗಿಬಿಡುವೆ 
ತಂದು ಕೊಡಬಲ್ಲ ಸಾಮರ್ಥ್ಯ ಇದೆ ನನ್ನಲ್ಲಿ 
ನನ್ನ ಜೀವನವನ್ನೇ ನಿನಗಾಗಿ ಬರೆದಿರುವೆ 
ಅದಕೂ ಮಿಗಿಲು ಉಡುಗೊರೆ ಎಲ್ಲಿ ತರಲಿ 

ನೀ ಇದ ಓದಿ, ಸ್ಪಂದಿಸುವ ರೀತಿಯ 
ಊಹೆಗೈದೇ ಸಂಭ್ರಮಿಸೋ ಹುಚ್ಚ ನಾನು 
ಮಡಚಿ ಅಡಗಿಸಿ ಇಟ್ಟ ಅಷ್ಟೂ ಕವನಗಳ 
ಕಣ್ಣು ಹಾಯಿಸಿ ಜೀವ ತುಂಬಿಸುವೆಯೇನು?!!

                                          --ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩