ಕಾವ್ಯಾಂಜಲಿ !!!

ಮತ್ತೆ, ಮತ್ತೆ "ಮತ್ತೆ!!" ಎಂದು 
ಮೆತ್ತಗೆ ಮತ್ತೇರಿಸುವಂತೆ
ಮಾತಿಗೆ ಎಡೆಮಾಡಿಕೊಟ್ಟ 
ನಿನ್ನ ಮೃದುತ್ವಕ್ಕೆ ಮೆತ್ತಿಕೊಂಡೆ 
ಸತ್ತೇ ಹೋಗಿರುವೆ ಎಂದು 
ಅಂದುಕೊಂಡಿದ್ದ ಭಾವನೆಗಳಿಗೆ 
ನಿನ್ನ ಹೆಸರಿಂದ ಹೊಮ್ಮುವ 
ಬಿಸಿಯುಸಿರ ಬೀಜವ ಬಿತ್ತಿಕೊಂಡೆ 

ಬಸವಳಿದು ಬೆಂದ ಒಡಲಿಗೆ 
ತಂಪೆರೆದ ನಿನ್ನ ಅಪ್ಪುಗೆಯ 
ಸ್ಪರ್ಶದೊಳಗಿನ ಕಾವು 
ನಿಶ್ಕಲ್ಮಷ ಕಾಮನೆಯ ಎಬ್ಬಿಸಿತ್ತು 
ನಿನ್ನ ಕಾಣುವ ಹಂಬಲದ 
ತುದಿಗೆ ನೆಮ್ಮದಿಯ ಭಾವ 
ಕೈ ಮುಗಿಯಿತೆನ್ನ ಮನವು 
ಇಟ್ಟು, ನಿಂತಲ್ಲೇ ಮೂರು ಸುತ್ತು 

ನಿನ್ನ ಕಣ್ಣಿನ ಸುತ್ತ 
ಸುಕ್ಕು ಹಿಡಿಸುವ ಚಿಂತೆ 
ಕಂಡೊಡನೆ ಎನ್ನ ಮನ 
ಮೌನ ಮುರಿದ ವೀಣೆ 
ಮಿಡಿಯಿತು ತಂತಿಗಳ 
ಬಿಕ್ಕಿತು ತುಸು ಬಹಳ 
ಎದೆಗೆ ಒರಗಿಸಿ ಸುಕ್ಕ 
ಬಿಡಿಸುವಗಸನು ನಾನೇ !!

ನಾಲ್ಕಾಣೆ ಕುಂಕುಮ 
ಎಂಟಾಣೆ ದಿಂಡು 
ಮೈ ತುಂಬ ಸಂಭ್ರಮ 
ನೋಟಕೆ ತಂದು 
ನಿನ್ನ ಹಾಡಿ, ಹೊಗಳಿ 
ಚೂರು ಸುಳ್ಳು ಬೊಗಳಿ 
ಸಿಕ್ಕಿ ಬಿದ್ದು ಕ್ಷಮೆಯ 
ಕೋರಲೇ ಇಂದು ?!!

ಲೋಕವನ್ನೇ ಮರೆತು 
ನಿನ್ನನ್ನೇ ಕುರಿತು 
ಹೊಗಳುವ ಸಾಲುಗಳ 
ನೂಕು-ನುಗ್ಗಲು ಈಗ 
ನಾ ಹಿಡಿದ ಲೇಖನಿ 
ನಿನ್ನ ತೋರು ಬೆರಳಾಗಿ 
ಕರೆದೊಯ್ಯುವ ತಾಣ 
ನಿನ್ನ ಹೃದಯದ ಭಾಗ 

              --ರತ್ನಸುತ 

Comments

  1. 'ನಿಶ್ಕಲ್ಮಷ ಕಾಮನೆ' ತುಂಬಾ ಅಪರೂಪ ಅಲ್ಲವೇ! ಒಳ್ಳೆಯ ಭಾವ ತೀವ್ರತೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩