ನನ್ನವುಗಳ ನಾನೇ ಮರೆತು !!

ನನ್ನವುಗಳ ನಾನೇ ಮರೆತು 
ನನ್ನದಲ್ಲದ ದಿಕ್ಕಿನಲ್ಲಿರಿಸಿ 
ಅಂತೆಯೇ ದಿಢೀರ್ ಪಥ ಬೆಳೆಸಿ 
ಅಚಾನಕ್ಕು ಕಣ್ಣಾಯಿಸಿ 
ವೇಗ ಚೂರು ಹಗುರಗೊಳಿಸಿ 
ಹಾಗೇ ನಿಂತು ನೋಡುತ್ತಾ 
ಉನ್ಮತ್ತನಾಗಲೇ ಬೇಕು
ಸಿಟ್ಟು, ಬೇಸರ, ಅತೃಪ್ತತೆಯಿಂದ 

ನನ್ನವುಗಳ ನಾನೇ ಮರೆತು 
ನನಗೆಟುಕದ ಎತ್ತರದಲ್ಲಿರಿಸಿ 
ಆ ಎತ್ತರಕೆ ಹೇಗೋ ಬೆಳೆದು 
ಏನನ್ನೋ ಅರಸುತ್ತಿರುವಾಗ 
ಧೂಳು ಸರಿಸಿ, ಸ್ವಲ್ಪ ತೆರೆದು 
ಕದ್ದು ಮುಚ್ಚಿ ಓದಿಕೊಂಡು 
ಅರ್ಥವನ್ನೇ ತಿರುಚ ಬೇಕು 
ಅಲ್ಪ ಶ್ರದ್ಧೆ ಅಹಂಮ್ಮಿನಿಂದ 

ನನ್ನವುಗಳ ನಾನೇ ಮರೆತು 
ಗಾಳಿಯಲ್ಲಿ ಬಿಟ್ಟು ಕೊಟ್ಟು  
ನಂಟಿಗೆಳ್ಳು ನೀರೆರೆದು 
ಬೆನ್ನು ಮಾಡಿ ನಿಂತಿರಲು 
ಉಸಿರುಗಟ್ಟಿ ಬಿಕ್ಕಳಿಸೆ 
ನನ್ನ ಮುಖವ ಸವರ ಬೇಕು 
ಖಾಸಾತನವ ಪ್ರಶ್ನಿಸದೆ 
ಮತ್ತೆ, ಮತ್ತೆ ಭಕುತಿಯಿಂದ 

ನನ್ನವುಗಳ ನಾನೇ ಮರೆತು 
ನನ್ನ ಬಳಿಯೇ ಇರಲು ಬಿಟ್ಟು 
ನಾನೇನೆಂಬುವ ಒಗಟಿಗೆ 
ಮತ್ತೊಂದು ಶಿಥಿಲ ಗಂಟಿರಿಸಿ 
ಎಳೆದರೆ ಬಿಗಿವುದೋ?!! ಇಲ್ಲ, 
ಬಿಡಿಸಿಕೊಲ್ಲುವುದೋ?!! ಎಂಬ 
ನೂರು ಒಗಟು ಹುಟ್ಟ ಬೇಕು 
ತಪ್ಪು ಲೆಕ್ಕದಾಟದಿಂದ 

ನನ್ನವುಗಳ ನಾನೇ ಮರೆತು 
ಹೂತು ಹಾಕಲೆನಿಸಿ ಬಗಿದು 
ಸತ್ಯ ಅಂತರಂಗದಲಿ  
ಸುಳ್ಳು ನೆಪದಿ ಹಪಹಪಿಸಿ
ಬೇರಾರದೋ ಮುಖವಾಡದ
ಹಂಗಿನಲಿ ನಡೆಯುವಾಗ 
ಗುರುತು ಹಿಡಿದ ನನ್ನವುಗಳ 
ಅಪ್ಪ ಬೇಕು ತಪ್ಪೊಪ್ಪಿನಿಂದ 

                   -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩