ಅಸಹಾಯ"ಕಥೆ"

ನೋವುಂಟು ಎದೆಯೊಳಗೆ 
ನೂರೆಂಟು ಅಳುಕುಂಟು 
ಹಂಚಿಕೊಳಲಾಗದ ಮೌನದೊಡನೆ 
ಕಾಲುಂಟು ಕಂಬನಿಗೆ 
ಕೋಲು ರೆಪ್ಪೆಯ ಬಡಿತ 
ಕಣ್ಣು ತುಂಬುವ ಸುಳುವು ಸಿಕ್ಕಿದೊಡನೆ 

ಕತ್ತಲಲಿ ನೆರಳಿರಿಸಿ
ಬೆಳಕಿನಲಿ ಬೆವರಿಳಿಸಿ 
ಆತಂಕದ ಹೆಜ್ಜೆ ಇಟ್ಟೆಡೆಯಲಿ 
ಅನುಚಿತ ಒಡನಾಟ 
ತಿರುಚು ದೂರದ ನೋಟ 
ಅಪನಂಬಿಕೆಯೇ ನಿಜ ತಾ ಕಡೆಯಲಿ 

ದುಪ್ಪಟ್ಟು ದಿಗಿಲೊಡನೆ 
ದಾಪುಗಾಲಿನ ಕನಸು 
ಇರುಳು ದಾಹವ ನೀಗಿಸದ ಬಾವಿಯು
ಹೆಬ್ಬೆಟ್ಟು ಅಚ್ಚಿನಲಿ 
ಚಕ್ರವ್ಯೂಹದ ನಕ್ಷೆ 
ಕಪಿಮುಷ್ಟಿಯಲಿ ಬೆವರ ಹೆಣಭಾರವು 

ನೆನ್ನೆಗಳು ನಿಕೃಷ್ಟ 
ನಾಳೆಗಳು ಅಸ್ಪಷ್ಟ 
ಈ ದಿನವೇ ಎಲ್ಲಕೂ ಮೂಕ ಸಾಕ್ಷಿ 
ಮುರಿದ ರೆಕ್ಕೆಯ ತೋಳು 
ದಟ್ಟ ಅಡವಿಯ ಬಾಳು 
ದಿಕ್ಕು ದೆಸೆಗಾಣದವ ಸೋತ ಪಕ್ಷಿ 

ರಾಮ ರಕ್ಕಸರಿಬ್ಬರೂ 
ಒಂದು ಕೈಯ್ಯಲ್ಲಿ 
ತಕ್ಕಡಿಯ ಮತ್ತೊಂದು ಕೈ ನನ್ನದು 
ಮುಗಿವೆ ರಾಮನಿಗೆ, ಇಲ್ಲವೇ
ಒಲಿಸಿಕೊಳ್ಳುವೆ ರಕ್ಕಸನ 
ಏನು ಮಾಡಲಿ?!! ನನ್ನ ಅಸಹಾಯ"ಕಥೆ"ಯಿದು 

                                             -- ರತ್ನಸುತ 

Comments

  1. ಈ ಅಸಹಾಯ"ಕಥೆ" ನಮ್ಮದೂ ಸಹ. ಮಾನವನೋ, ದೇವನೋ ಅಥವಾ ದಾನವನೋ ಅಥವಾ ಬರೀ ಮೃಗಯಾ ಮನವೋ ಅದೇ ತಾಕಲಾಟ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩