ರಾಜ, ರಾಣಿ, ಅರಮನೆ !!

ರಾಜಿಯಾಗುವುದು ಬೇಡ
"ಅರಮನೆ" ಅಂದರೆ 
ಅರಮನೆಯನ್ನೇ ಕಟ್ಟೋಣ 
ಮನಸಿನಿಟ್ಟಿಗೆ ಜೋಡಿಸಿ 
ಒಲುಮೆಯ ಸಿಮೆಂಟು ಸುರಿದು 
ಬೆವರ್ಹರಿಸಿ ದೃಢವಾಗಿಸಿ  
ಕನಸುಗಳ ಬಣ್ಣ ಹಚ್ಚಿ 
ಆಸೆಗಳ ಬಾಗಿಲನ್ನಿರಿಸಿ 

ಕಟ್ಟೋಣ ಒಂದನು 
ನಮ್ಮೊಲವಿನ ವ್ಯಾಪ್ತಿಗೂ ಮೀರಿ 
ಉಂಡ ಕಹಿಗಳ ಆಳಕೆ ಕೊರೆದು 
ಅಡಿಪಾಯವಾಗಿಸೋಣ 
ಉಂಡಷ್ಟೂ ಅನುಕೂಲ ನಮಗೆ 
ನಮ್ಮರಮನೆ ಶಾಶ್ವತಗೊಳಲು 
ರಾರಾಜಿಸುವುದು ಬೇಡ ಬೆಳಕಲ್ಲಿ 
ನಂಬಿಕೆಯ ಹಚ್ಚಿಟ್ಟರೆ, ನಿತ್ಯ ಹೊನಲು 

ನನ್ನೆದೆ ಸಿಂಗಾರಗೊಂಡ ಅಂತಃಪುರ 
ಅಲ್ಲಿ ವಿಹರಿಸಲು, ವಿರಮಿಸಲು ಅನುಮತಿ ಇಲ್ಲ 
ಬೇರಾರಿಗೂ ನಿನ್ನ ಹೊರತು 
ನಿನ್ನ ಸಖಿಯರಿಗೂ ನಿಷೇಧ  
ಇನ್ನು ನಿನ್ನದೋ !!
"ಛೀ ತುಂಟ"ನಲ್ಲ"...." ಅನ್ನದಿರು 
ಮಥಿಸದೇ ಸುಧೆಯೀವ ಸಾಗರ 
ಅಲ್ಲಿ ಪ್ರೇಮ ಪಗಡೆ ಆಟ ನನ್ನದು 

ಹೊರಾಂಗಣ ಸಾರಿಸಿದ ಗಂಧ ಲೇಪ 
ಆಧಾರ ಸ್ತಂಬಗಳು ಬೆಳ್ಳಿ ಸಾಲು 
ಕಿಟಕಿಯ ಕೋಲಿಗೆ ಚಿನ್ನದ ಸ್ಪರ್ಶ 
ಪರದೆಯೋ ಮುಟ್ಟಲು ರೇಷ್ಮೆ ನೂಲು 
ಸಿಂಹಾಸನದ ಮೇಲೆ ಉಕ್ಕು ನೋಟ 
ನೀ ನನ್ನ ಪಕ್ಕದಲಿ ಪಟ್ಟದರಸಿ 
ಸಭೀಕರೆಲ್ಲರೂ ಶೃಂಗಾರ ಕವಿಗಳೇ 
ಬಣ್ಣಿಪರು ನವ್ಯ ಪದಗಳ ಶೋಧಿಸಿ 

ನಮ್ಮ ಸಾಮ್ರಾಜ್ಯದಲಿ ನಮ್ಮದೇ ನೇಮ 
ನಿನಗೆ ನನ್ನದು, ನನಗೆ ನಿನ್ನ ಪ್ರೇಮ 
ಸಂಭೋಗ ಕೇವಲ ಕ್ಷಣಿಕ ಅಭಿವ್ಯಕ್ತಿ 
ಅದಕೂ ಮೀರಿದ ಸುಖಕೆ ಇಲ್ಲ ಕ್ಷಾಮ 
ಮಾತಲ್ಲೇ ಮುಳುಗಿಸಿ ಗಿಂಜಿದೆ ಮುತ್ತಿಟ್ಟು
ಇಂದಿಗೆ ಈ ಗಂಜಿ ಕುಡಿಯೇ ನಂಜಿ 
ಇಂದಿನರಮನೆಯುರುಳಿಸಿ ಕಟ್ಟುವ ನಾಳೆ -
- ಮತ್ತೊಂದನು, ಕಟ್ಟಿ ನೋಡು ಬಾಜಿ !!

                                        -- ರತ್ನಸುತ 

Comments

  1. "ಉಂಡ ಕಹಿಗಳ ಆಳಕೆ ಕೊರೆದು" ನಾವೆಲ್ಲ ಮೊದಲು ಕಳಿಯಲೇಬೇಕಾದ ಸರಳ ಸೂತ್ರ ಅಲ್ಲವೇ ಗೆಳೆಯ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩