ಹೀಗಾಗಬೇಕಿತ್ತು!!

ನೀ ಒಮ್ಮೆ ನೋಡಬೇಕಿತ್ತು 
ನಾ ಎಂದೂ ಇರದಂಥಿದ್ದುದ 
ಇಷ್ಟು ಸನಿಹ ಇದ್ದೆಯಲ್ಲ ?!!
ಅದಕ್ಕಾಗೇ ನನ್ನ ಈ ವಿತಂಡತನ   

ನೀ ಗಮನಿಸಬೇಕಿತ್ತು 
ಕಂಬನಿಯ ಹಿಡಿದಿಟ್ಟಾಗ 
ಒತ್ತಾಯಕೆ ತುಟಿ ಅರಳಲು 
ದುಃಖ ಕಿವಿಯ ಕೆಂಪೆಬ್ಬಿಸಿದ್ದ   

ನಾ ಕನವರಿಸಿ ಬೆಚ್ಚಿದ್ದ ನಿಜವ 
ಕಥೆಯಾಗಿ ಕೇಳಿ ಮೆಚ್ಚಿದವಳು 
ಹಿಂದೆಯೇ ಮೂಡಿದ ಚಿಂತಾ ರೇಖೆಗಳ,  
ಉರಿ ಬೆವರಿಳಿದುದ್ದ ಪರಿಗಣಿಸಬೇಕಿತ್ತು  

ಚಿಟ್ಟೆ ಸ್ವಭಾವವ ಬಿಟ್ಟು 
ಒಂದೆರಡು ಕ್ಷಣವಾದರೂ ನಿಲ್ಲಬೇಕಿತ್ತು 
ಸುಡುವ ಅಂತರಂಗದೊಳಗೆ 
ಕೊನೆ ಪಕ್ಷ, ಬೇಗೆಯ ಅರಿವಾಗುತಿತ್ತು ನಿನಗೆ 

ಎಷ್ಟೋ ತುಮುಲಗಳ ಅಡಗಿಸಿಟ್ಟಿದ್ದೆ  
ಸೋಗೆ ಅಂಚಲ್ಲಿ ಕೆದಕ ಬೇಕಿತ್ತು 
ಬಿಕ್ಕುತ ಎಲ್ಲವನು ಹಂಚಿಕೊಂಡು 
ಹಗುರಾಗುವ ಮನಸಾಗಬಹುದಿತ್ತು 

ಋಣ ತೀರಿತೆಂದು ತೊರೆವ ಮುನ್ನ 
ಸುಳುವೊಂದ ಕೊಟ್ಟು ಸಲಹಬೇಕಿತ್ತು 
ಹೃದಯಕೆ ಉಗುರಷ್ಟು ಗಾಯವ ಮಾಡಿ 
ತೆರೆದು ಬಿಡಬೇಕಿತ್ತು ನೆನಪಿನ ಮಳಿಗೆ 

                                   -- ರತ್ನಸುತ 

Comments

  1. ತೊರೆದ ನಲ್ಲನ ಸಾಚಾತನ ಅರಿವಾಗಲಿಲ್ಲ ಆಕೆಗೆ. ಅದೇ ವಿಪರ್ಯಾಸ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩