ಸರ್ವಾಂತರ್ಯಾಮಿ !!

ಹಸಿವನ್ನ ಬದಿಗೊತ್ತಿ 
ಕಾವಿ ತೊಟ್ಟಾಗ 
ನಮ್ಮೊಳಗಿನ್ಹಸಿವು 
ಬಡವಾಯಿತಲ್ಲ ಪ್ರಭು 
ನೀ ಸೃಷ್ಟಿಸಿದ್ದೇ ತಾನೇ 
ಆಸೆ, ಮೋಹ, ಮತ್ಸರ  
ಒಂದು ದುಃಖಕೆ ಮೂಲ
ಮತ್ತೊಂದು ಬದುಕೇ?

ನೀ ಕೊಟ್ಟ ಸುಳುವ್ಹಿಡಿದು 
ಬ್ರಹ್ಮ ಗುಟ್ಟನು ಅರಿತೆ 
ಇಟ್ಟೆ ನಾಲ್ಕು ತಲೆ 
ಕೊಟ್ಟೆ ಒಳ್ಳೆ ರೂಪ 
ಕಮಲವೇರಿಸಿ ಅವನ 
ಹಣೆಬರಹ ಬರೆದೆ 
ಹಣೆಬರಹವ ಬರೆವ 
ಕೆಲಸವನು ಕೊಟ್ಟು 

ಪರಶಿವನ ಮಸಣವ 
ಮನ್ಮಥನ ಬಾಣವ 
ಒಗ್ಗೂಡಿಸುವ ಕಲೆ 
ನನಗಿತ್ತೆ ಗುರುವೇ 
ಕಾಲ ಕಾಲಕೆ ತಿದ್ದಿ 
ರೂಪಿಸಿದೆ ಹೊಸಬರನು 
ಪಾಪ ಕಾರ್ಯಕೆ ಪ್ರತಿ 
ಪುಣ್ಯ ದೇವರ ಹೆಸರು 

ಏರಿಸಿದೆ ಒಬ್ಬನ ಶಿಲುಬೆಗೆ 
ಮತ್ತೊಬ್ಬನಿರುವಿಕೆಯ 
ಸಾಬೀತು ಪಡಿಸಲು 
ಹುಟ್ಟು ಹಾಕಿದೆ ಪ್ರೊಫೆಟ್ಟನ 
ಮನೆ ಬಿಟ್ಟು ಹೊರ ನಡೆಸಿ 
ಜ್ಞಾನಿಗಳ ಮಾಡಿದೆ 
ಅವರವರ ತತ್ವಾಧರ್ಷಗಳ 
ಹೊಸ ಧರ್ಮಗಳಾಗಿಸಿ 

ಮುಗಿಸಿದೆ, ಬಾಗಿಸಿದೆ 
ಮಂಡಿ ಊರಿಸಿ ನಿಲ್ಲಿಸಿ 
ಏಕ ಮತದ ಬಾಳಿಗೆ 
ಸೌಹಾರ್ದತೆಯ ಪ್ರೀತಿಗೆ 
ಅದೇ ಮುಳುವಾಯಿತೇ 
ತಿದ್ದಬೇಕೆ ಮತ್ತೆ ಈಗ ?
ಎಲ್ಲವನ್ನೂ ಅಳಿಸಿ ಹಾಕಿ 
ಮತ್ತೊಮ್ಮೆ ಗೀಚಿ ಕೂತು

ಅಜ್ಞಾನಿ ನಾನು 
ಕೈ ಹಿಡಿದು ಬರೆಸೈಯ್ಯ  
ಧರ್ಮ ಯಾವೊದೋ 
ಅಧರ್ಮ ಯಾವುದೋ ತಿಳಿಸಿ 
ಬೆತ್ತಲಾಗಿರುವೆ ತಂದೆ 
ಇನ್ಯಾರ ಮಾನ ಕಾಯಲಿ 
ದೀಕ್ಷೆ ನೀಡು ಬಾರ 
ಸಮಾನತೆಯ ಉಡುಪು ತೊಡಿಸಿ!!

                            -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩