ನನ್ನೊಳಗೆ ನಾನು!!

ಇದ್ದಷ್ಟೂ ಅನುಕೂಲ ಒಳಗೆ 
ಹೊರಗೆ ಇಣುಕಿದಷ್ಟೂ ಕೇಡು ಹೆಚ್ಚು 
ಇದ್ದಂತೇ ಇರುವುದು ಒಲಿತು  
ಬದಲಾವಣೆಯ ಬಯಕೆ ಹೇರು ಕಿಚ್ಚು 

ಹಸಿದರೆ ಹೊಟ್ಟೆಗಷ್ಟೇ ನಷ್ಟ 
ಒಡಲಿಗಿಲ್ಲದ ಬಾದೆ, ಎಲ್ಲ ನಿಶ್ಚಲಗೊಂಡವು 
ಬಾಗಿಲ ಹಾಯುವ ಧೈರ್ಯ ಮಾಡಿದೆ 
ಕಾಗೆ, ಹದ್ದುಗಳು ಹದ್ದು ಮೀರಿ ಎರಗಿದವು 

ಕಣ್ಣಿದ್ದುದು ಅವಲೋಕಿಸಲು 
ಮೇಲ್ಪದರವ ಮಾತ್ರವೇ ಹೊರತು 
ಆಳಕ್ಕಿಳಿದು ಹೂಳು ಸರಿಸುವ ದೃಷ್ಟಿ 
ದೂರವೂ ಅಲ್ಲ, ದಿವ್ಯವೂ ಆಗಿರಲಿಲ್ಲ 

ನಾಲಿಗೆ ತಕ-ತಕ ಕುಣಿವುದು ಒಳಗೆ 
ಮೂಲ ಅರ್ಥ ತಪ್ಪುವುದು ಸೊಲ್ಲು 
ಹೃದಯವೆಂಬುದು ಎಚ್ಚರ ವಹಿಸಿಕೊಳ್ಳದೇ
ಬರೇ ಬಡೆದಾಡಿಕೊಂಡಿರುವ ಕಲ್ಲು 

ಏರು ಬುಜಗಳಿಗೆ, ಕೆಟ್ಟ ಕುಜ ದೋಷ 
ಹಿಂದೆಯೇ ಬೆನ್ನು ಹತ್ತಿರುವ ಶನಿ 
ಹಸ್ತ ರೇಖೆಗಳು, ಭವಿಷ್ಯ ರೂಪಿಸುವ ಬದಲು
ಕಾಯುತುವೆ ಚಾಚಿ, ಕೇಳಬಯಸಿ ಕಣಿ  

ಜಿಜ್ಞಾಸೆಯ ಕೊನೆಗೆ ನಿರ್ಲಿಪ್ತ ಭಾವ 
ಅಲ್ಪತನದೊಳಗೂ ಅಹಂ ಸಂಭವ 
ಕಿಟಕಿಯ ಕಿಂಡಿಯಲಿ ತಿಳಿ ಬೆಳಕ ನುಸುಳು 
ಅದ ಕಂಡ ಕತ್ತಲಿಗೆ ಉಂಟಾದ ದಿಗಿಲು 

ಇನ್ನೂ ಬರಲಾಗಿಲ್ಲ ಹೊರಗೆ 
ಶವ ಪೆಟ್ಟಿಗೆಯೊಳಗುಳಿದ ಜೀವಂತ ಹೆಣ
ಸೋಲುವ ಭಯವಿದೆ ಎದುರಿಸಲು ನನ್ನ 
ನನ್ನೊಳಗೆ ಹೀಗೊಂದು ರಣ ಕಾರಣ 

                                   -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩