ಸುಳ್ಳು ಸತ್ಯಗಳ ನಡುವೆ!!

ಲೋಕವೇ ಮಂಜು ಮಂಜು 
"ತಡಿಯಿರಿ ಒರೆಸಿಕೊಳ್ಳುವೆ ಕನ್ನಡಕ" 
ಲೋಕ ಇನ್ನೂ ಮಂಜು ಮಂಜು 
"ಮತ್ತೊಮ್ಮೆ ಕಣ್ಣುಜ್ಜಿಕೊಳ್ಳುವೆ ತಾಳಿ" 
ಲೋಕ ನಿಜಕ್ಕೂ ಮಂಜು ಮಂಜು? ಇನ್ನೂ ಸಮ್ಮತಿಯಿಲ್ಲ!! 

ಕಂಡ ನಿಜವ ನಂಬಲಾಗಿಸದ 
ನಮ್ಮೊಳಗಿನ ಅಳುಕು, ಕೊಳಕುಗಳ 
ಪ್ರಶ್ನಿಸದೆ, ಪ್ರಮಾಣಿಸದೆ ನಂಬಿಸುವ 
ನಮ್ಮೊಳಗಿನ ಮೊಂಡುತವೇ ಸತ್ಯ 
ಪುಕ್ಕಲುತನವೂ ಸತ್ಯ, ಮತ್ತಿನ್ನಾವುದು ಸುಳ್ಳು?

ಮುಖವಾಡ ಧರಿಸಿದವ ತಿಳಿವನೇ?
ನಿಜ ಬಣ್ಣದಲಿ ಕಣಕ್ಕಿಳಿದವರ ಆಟ 
ತಾನು ಸುಳ್ಳೆಂಬುದು ಸತ್ಯವಾದರೂ
ಸತ್ಯಶೋಧಕನಂತೆ ಅಲೆದಾಡುವ 
ಸುಳ್ಳಾಗಿ ಉಳಿದು, ಒಪ್ಪದೆ ಪರರ ಸತ್ಯ 

ಕತ್ತಲೇ ಸತ್ಯ, ಹುಸಿ ಬೆಳಕು ಉಡುಪು 
ಬೆತ್ತಲೆ ಜಗತ್ತೇ ಇದಕ್ಕೆಲ್ಲಾ ಸಾಕ್ಷಿ 
ನಾನೆಂಬುದು ನನಗೆ ಸಮಾದಾನದ ಗೆಲುವು 
ಅವರಿವರ ಗೆಲುವು ಟೀಕೆಗೆ ನಾಂದಿ 
ಬೆತ್ತಲಾಗಲು ಬೇಕು ಕತ್ತಲು, ಬೆಳಕು "ನಕಲಿ" 

ನನ್ನೋಳಗಿನನ್ನನ್ನು ಕಲ್ಲೊಳಗೆ ಇರಿಸಿ 
ನಾನು ನಾನಾಗಲ್ಲದೇ ನೋಡುವ ಗಳಿಗೆ 
ಕಲ್ಲ ಮೇಲೆ ನನಗೆ ಎಲ್ಲಿಲ್ಲದ ಕೋಪ 
ಅಸಡ್ಡೆ, ತಿರಸ್ಕಾರ, ಸಿಟ್ಟು, ಮುನಿಸು 
ಓ ನನ್ನತನವೇ ಇದೇ ಸತ್ಯ, ನನ್ನನ್ನು ಕ್ಷಮಿಸು 

ಲೋಕ ಮಂಜುಗಟ್ಟಿಯೇ ಇದೆ 
ಆದರೂ ನಿಷ್ಪ್ರಯೋಜಕ ಪ್ರಯತ್ನ 
ಕನ್ನಡಕದ್ದೂ ಆಯ್ತು, ಕಣ್ಣಿನದ್ದೂ ಆಯ್ತು 
ಇನ್ನು ಮನಸನ್ನು ಸ್ಪಷ್ಟವಾಗಿಸಬೇಕು  
ಸತ್ಯವೇನೆಂದು ತಿಳಿಯಲು, ನಾನು ಸುಳ್ಳೆಂದು ಅರಿಯಲು!!

                                                        --ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩