ನೋಟೀಸು, ನೋಟೀರ್ಸು !!

ಹಿಡಿದಿಟ್ಟ ಕಂಬನಿ ಪದವಾಗೋ ಮುನ್ನ 
ಮೆಲ್ಲಗೆ ತುಟಿ ಅರಳಿ ಮಾತಾಡಲೆನ್ನ 
ಅಪ್ಪಿ ಸಾಂತ್ವನಕೆ ಮುಂದಾಗದಿರು ಗೆಳತಿ 
ಇದ್ದಂತೆ ಇರಲು ಬಿಡು ಹೀಗೆಯೇ ಚನ್ನ 

ಬಿಗಿದಿಟ್ಟ ಮುಷ್ಟಿಯಲಿ ತಗೆದಿಟ್ಟ ಹೃದಯವಿದೆ 
ಬೆರಳ ಸಂದಿಗಳಿಂದ ರಕ್ತ ಚಿಮ್ಮಿ 
ಇನ್ನೂ ಬಡಿದಾಡುತಿದೆ ನೋವಿನಲ್ಲೇ 
ನೋಡಿ ಬೆಚ್ಚದಿರು ಈ ಕೃತ್ಯವನ್ನ 

ಬೆನ್ನ ಮೇಲೆ ಬಾಸುಂಡೆ ಏಟಿನ ಗುರುತು 
ಕಾಣದಂತೆ ಅಡಗಿಸಿಟ್ಟಿರುವೆ ನಾನು 
ಏನೆಂದು ಕೇಳಿದರೆ, ನನ್ನ ಉತ್ತರ ಮೌನ 
ಎದುರಿಸಲಾರೆ ನಿನ್ನ ಪ್ರಶ್ನೆಗಳ ಬಾಣ 

ಬರುವ ಮುನ್ನವೇ ಮನವ ಗುಡಿಸಿಡುವೆ ಸ್ವಚ್ಛ 
ಎಲ್ಲವೂ ಮೊದಲಿನಂತೆಯೇ ಇರುವ ಹಾಗೆ 
ನೀ ಅಲ್ಲಿ ಲೋಪಗಳ ಹುಡುಕಿ ಕೂರದಿರು 
ಮತ್ತೆ ಹಳೆ ನೆನಪುಗಳ ಬಯಸುವುದು ಪ್ರಾಣ 

ನಿನಗೆ ನಾ ಕೊಟ್ಟ ಆ ಮೊದಲ ಹೂ ಗುಚ್ಛದಲಿ  
ಹಿಡಿ ಭಾಗದಲ್ಲಿ ಮುಳ್ಳುಗಳ ಸೆರೆಯಾಗಿದೆ 
ದಳಗಳೆಲ್ಲವೂ ಉದುರಿ ಹೋದವು ದಿನಗಳೆದು //ಒಲವಂತೆ//
ಮುಳ್ಳಿನ ಅಸ್ತಿತ್ವವದರ ಅಸಲೀತನ 

"ಮರೆತು ಬಿಡು" ಅನ್ನುವುದು ತುಸು ಕಷ್ಟವೇ ಸರಿ 
ಹೇಳುಗರಿಗೂ, ಕೇಳುಗರಿಗೂ, ಓದುಗರಿಗೂ, ನೋಡುಗರಿಗೂ 
ಅದಕಾಗಿಯೇ ದೂರವಾದೆ ನುಡಿಯದೆ ಏನೂ 
ಓಹ್ ಜೀವವೇ ಒಮ್ಮೆ ಕ್ಷಮಿಸಿ ಬಿಡು ನನ್ನ !!

                                                -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩