Tuesday 13 October 2015

ಬಟ್ಟೆ ತೊಟ್ಟವು

ಪುಟ್ಟ ಕಣ್ಗಳು
ಹುಟ್ಟುತ್ತಲೇ ಕಂಡದ್ದು
ತಾನು ಮಾತ್ರವೇ ಬೆತ್ತಲಾಗಿದ್ದ


ಸುತ್ತಲೂ ಬಟ್ಟೆ ತೊಟ್ಟವರೆಡೆ
ಪ್ರಶ್ನಾತ್ಮಕ ನೋಟ
ತಾ ಗೊದಲಕ್ಕೊಳಗಾಯಿತು


ಬೆಳೆ-ಬೆಳೆಯುತ್ತಿದ್ದಂತೆ
ಇಂಚಿಂಚೇ, ಇಂಚಿಂಚೇ ಬಟ್ಟೆ
ಹೆಚ್ಚುತ್ತಲೇ ಹೋಯಿತು


ತೋರ್ಪಟ್ಟ ತೊಗಲಿಗೆ ಸಿಗ್ಗು
ಇದ್ದಷ್ಟೇ ಬಟ್ಟೆಯನ್ನ ಹಿಗ್ಗಿಸಿಕೊಂಡಾಗ
ಹರಿದದ್ದು ಮಾನ


ಹುಟ್ಟಿದಾಗ ಹೆಸರಿಲ್ಲದೆ
ವಿಶ್ವಮಾನವನಂತೆ ಉಬ್ಬಿದ ಎದೆಗೆ
ಕವಚ ತೊಟ್ಟದ್ದಾಗಿದೆ
ಹೆಸರೊಂದು ಬಿದ್ದು


ತಾನೀಗ ಬೆತ್ತಲಾದವರ ಕಂಡು
ಅಸಡ್ಡೆಯಿಂದ ತಲೆ ತಗ್ಗಿಸಿಯೋ
ಕೋಪದಿಂದ ಕಲ್ಲು ಹೊಡೆದೋ
ಕಾಮನೆಯಿಂದ ಬಯಸಿಯೋ
ಅಥವ ನಿರ್ಲಕ್ಷಿಸಿದಂತೆ ನಟಿಸುತ್ತಿದೆ


ತಾನೇ ಮರೆಯಲ್ಲಿದ್ದು
ಬಯಲಿಗಿಳಿದವರ ಬಲಿಗೊಡುತ್ತಿದೆ
ಹೆಸರಿಟ್ಟ ಪ್ರಾ()ಣಿ!!


                                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...