ಹಾಡುವ ಹಕ್ಕಿಯೊಂದು
ಗೂಡು ಬಿಟ್ಟು
ಗೂಡು ಸೇರಹೊರಟಿತು
ಯಾವ ಗಡಿ-ಸೀಮೆಯ ಹಂಗಿಲ್ಲದೆ
ಅಸ್ಥಿರ ಬಿಡಾರ ಅದರದ್ದು
ಆದರೂ ರಸಿಕರ ಮನದಲ್ಲಿ
ಬೆಚ್ಚಗೆ ಹೂತುಬಿಟ್ಟಾಗ
ಎಲ್ಲೆಲ್ಲೂ ಅದರದ್ದೇ ಸದ್ದು
ಕೋವಿಯ ಕುದುರೆಗೆ ಒರಗಿ
ಮೈ ಮರೆತು ಹಾಡುವಾಗ
ಒಳಗಿದ್ದ ಸಿಡಿಗುಂಡು ಕೂಡ
ಅರೆಗಳಿಗೆ ನಿತ್ರಾಣಗೊಂಡಿತ್ತು
ಹಕ್ಕಿಯ ಹಾಡು ಭಾಷಾತೀತ
ಸಿಹಿಯೆಂದುಕೊಂಡವರಿಗೆ ಸಿಹಿ
ಹುಳಿಯೆಂದುಕೊಂಡವರಿಗೆ ಹುಳಿ
ಖಾರವೆಂದುಕೊಂಡವರಿಗೆ ಖಾರ
ಕಲ್ಲು ಹೊಡೆದವರು ಕಳ್ಳರಲ್ಲ
ಆದರೂ ಮುಖ ಮರೆಸಿಟ್ಟರು
ಪೆಟ್ಟಾದ ಹಕ್ಕಿಯ ಹಾಡಿಗೂ ತಲೆದೂಗಿದವರು
ಅದರ ನೋವಲ್ಲಿ ತಮ್ಮ ನೋವ ಕಂಡರು
ಹಕ್ಕಿಯ ಬಾಯಿ ಕಟ್ಟಲಾಗಿಯೂ
ಉಲಿಗೆ ಅವಿರತ ಉಳಿವಿತ್ತು
ಬೇಡದ ಕಿವಿಗಳು ಕಿವುಚಿಕೊಂಡವು
ಬೇಕಿದ್ದವುಗಳಲಿ ನಲಿವಿತ್ತು!!
-- ರತ್ನಸುತ
No comments:
Post a Comment