ಚಿಗುರು


ಅಲ್ಲೆಲ್ಲೋ ಒಂದು ಚಿಗುರು
ದೊಣ್ಣೆನಾಯಕನ ಅಪ್ಪಣೆ ಪಡೆಯದೆ
ಆಗಷ್ಟೇ ಕಣ್ಣು ಬಿಟ್ಟಾಗ
ಬಣ್ಣಗಳೆಲ್ಲವೂ ಬಣ್ಣ ಹಚ್ಚಿಕೊಂಡಂತೆ
ಹುಚ್ಚೆದ್ದು ಕುಣಿಯುತ್ತಿದ್ದವು

ಮರೆಯಲ್ಲೇ ಬೆಳೆದು
ಮುಗಿಲತ್ತಲೇ ಮುಖ ಮಾಡಿ
ತವರ ಗಂಟಿಗೆ ವಿರುದ್ಧವಾಗಿ
ಚಾಚಿಕೊಂಡ ತಳಿರಿನಂಚಿಗೆ

ಮುದಿತನ ಉಂಟಾಗುವುದು ಕಟ್ಟಕಡೆಗೆ

ಒಂದು ಇಬ್ಬನಿಯಾದರೂ ಎಲೆಯಮೇಲೆ

ಅವಿರತವಾಗಿ ಉಳಿದುಕೊಂಡಿದ್ದರೆ

ಕಾಲ ಕಾಲದ ದಾಸೋಹ ಕಾಲವಾಗುತ್ತಿತ್ತು

ಎಲೆಯಂಚಿನ ಮೋಜುಕೂಟದಲ್ಲಿ
ಕೆಲ ಕಾಲ ವಾಲಾಡುತ್ತ ಬೇರ್ಪಟ್ಟು
ಮಣ್ಣ ರುಚಿಸುವ ಸಣ್ಣ ಹನಿ
ಬಿಟ್ಟು ಬಂದ ರಭಸಕ್ಕೆ ಎಲೆ ಕಂಪಿಸುತ್ತಲೇ ಇತ್ತು

ಅತ್ತಕಡೆಯಿಂದ ಮುಪ್ಪು ಹಣ್ಣಾಗಿಸುತ್ತಿದ್ದಂತೆ
ಇತ್ತಕಡೆ ದೊಣ್ಣೆನಾಯಕನ ಕಣ್ತಪ್ಪಿಸಲು
ಹರಸಾಹಸ ಪಡುತ್ತಿದ್ದ ಎಲೆಯ ಆತಂಕಕ್ಕೆ
ತುಪ್ಪ ಸುರಿಯುತ್ತಿದ್ದ ತಂಬೆಲರು
ಹಿಂದೊಮ್ಮೆ ಹಿತವೆನಿಸಿದ್ದೂ ಉಂಟು!!

ಇನ್ನೆಷ್ಟು ಕಾಲ ನಾಟಕ
?
ತೆರೆ ಬಿದ್ದ ಮೇಲೆ ಬಣ್ಣ ಕಳಚಲೇಬೇಕು
,
ಉದುರಿದೆಲೆಯ ಕಣ್ಣೀರ

ಕೊಂಬೆ, ಬುಡ, ಬೇರು ಪಕ್ವವಾಗಿ ಗ್ರಹಿಸಿ
ಬೀಳ್ಗೊಡುವ ವೇಳೆ
ಮತ್ತೊಂದು ಚಿಗುರ ಹಬ್ಬ;
ದೊಣ್ಣೆನಾಯಕನ ಅಪ್ಪಣೆಯಿಲ್ಲದಂತೆ
!!

                                   --
ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩