ತೀರದ ದಾಹ


ಬಿಗಿದಪ್ಪಿದಾಗ ಅಷ್ಟೇನೂ ಬಿಗಿಯೆನಿಸದಿದ್ದರೂ
ಬಿಡಿಸಿಕೊಳ್ಳುವಂತೆ ನಟಿಸಿ ಬಸಿಯುವುದರಲ್ಲಿ
ಸೋತ ಭಾವ ಅಭಾವ
ಗೆದ್ದ ಖುಷಿಗೆ ಮರುಜೀವ!!

ಅಪ್ಪಳಿಸಿ, ಕುಪ್ಪಳಿಸಿ, ಕಂಗೊಳಿಸಿ

ಉಳಿಸಿಕೊಳ್ಳುವುದೆಷ್ಟು ಶ್ರೇಷ್ಠ?
ಎಲ್ಲಕ್ಕೂ ಬಿಡುಗಡೆಯಿಟ್ಟೊಡೆ ಅದುವೇ

ಬಡವಾಗಗೊಡದ ಅಕ್ಷಯ ಪಾತ್ರೆ

ಮುಡಿಯಿಂದೆಲ್ಲೋ ಮರೆಯಾದ ಕ್ಲಿಪ್ಪು
ಇದ್ದಲ್ಲೇ ಪೂರ್ತಿ ಚದುರಿದ ಕ್ರಾಪು
ಹಣೆಯ ಮಡತೆಯಲಿ ಬೆವರ ಖಾತೆ
ತೊದಲು ಮಾತಿಗೆ ಬಯಕೆ ಬಂತೇ?!!

ಅಷ್ಟೂ ಹೊತ್ತು ಗಡಿಯಾರ ಸದ್ದು

ಕದ್ದು ಕೇಳುತ್ತಿತ್ತು ಎಲ್ಲ ಸದ್ದನ್ನು,
ಓಡಿರಬಹುದೇ ನಿಮಿಷವಾದರೂ
?
ಯಾಕೋ ಕತ್ತಲು ಕರಗುತ್ತಲೇ ಇಲ್ಲ
!!

ಬೆರಗುಗೊಳಿಸುವ ಬೆಳದಿಂಗಳ ಮೂಟೆಗಟ್ಟಿ

ರದ್ದಿ ಕೋಣೆಗೆ ದೂಡಿದ ತಪ್ಪಿಗೆ
ದೀಪ ವಿಲವಿಲನೆ ಒದ್ದಾಡಿ ಆರಿದಾಗ
ದಾಹ ನೀಗಿಸಿಕೊಳ್ಳಲು ತಾಮ್ರ ಚೊಂಬಿಗೆ
ಇದ್ದ ನೀರೂ ಸಾಲದಾಗಿತ್ತು

ದಾಹ ನೀಗಿದರದೆಂಥ ದಾಹ?
ನಿರಂತರವಾಗಿಸಿಕೊಂಡೆವದನು

ಯಾವ ತೀರದಲೂ ತೀರದ ದಾಹ
ದಾಹದ ದಾಹ!!

                                  --
ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩