ನವಿರು ಅನುರಾಗ

ಎಷ್ಟೆಂದು ಹುಡುಕುವುದು ನಸುಕನು
ಕಣ್ಣಲ್ಲಿ ಹೊತ್ತಿಟ್ಟು ಹಣತೆ
ಏನೆಂದು ಬರೆಯಲಿ ನಿನ್ನ ಕುರಿತು
ನೀನಾಗಲೇ ಬರೆದ ಕವಿತೆ

ಅಲ್ಲಲ್ಲಿ ಹೆಸರಿಡದ ಹೂ ಸಾಲು
ನೀ ಆಗಲೇ ನಡೆದು ಹೋದಂತೆ
ಹಸಿವಲ್ಲಿ ಬಳಲಿದ ಮನಸಿಗೆ
ನಿನ್ನೊಲವು ಮಾಗಿದ ಹಣ್ಣಂತೆ

ನಿಂತೊಮ್ಮೆ ನಕ್ಷತ್ರ ಎಣಿಸೋಣ
ಬೇಕಂತಲೇ ತಪ್ಪಿ ಲೆಕ್ಕವನು
ಅದು, ಇದು ಎನ್ನುತ ಕೂರದೆಲೆ
ಬಂದದ್ದ ಸವಿಯೋಣ ಎಲ್ಲವನೂ

ಮುತ್ತಿಟ್ಟು ನೋವನ್ನು ಮರೆಸುತ್ತ
ಮತ್ತಷ್ಟು ನೋಯಿಸುವೆ ಕ್ಷಮಿಸಿಬಿಡು
ಕನಸಲ್ಲಿ ಹೆಚ್ಚು ಕಾಯಿಸದೆ
ಬಿಡುವು ಮಾಡಿಕೊಂಡು ಬಂದುಬಿಡು

ಮೌನವನು ಸಂಭ್ರಮಿಸೋ ಆಟದಲಿ
ಮಾತಿಗೂ ಪಾಲು ಕೊಡು ಆಗಾಗ
ನನ್ನ ಹೆಜ್ಜೆಗೆ ಕೂಡು ಹೆಜ್ಜೆಯನು
ಆಗ ಇನ್ನೂ ನವಿರು ಅನುರಾಗ

                           --
ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩